ಬೆಲೀನ್‍ಸ್ಕಿ, ವಿಸ್ಸರಿಯೊನ್ ಗ್ರಿಗೋರ್ಯೆವಿಚ್
 	1811-48. ಹತ್ತೊಂಬತ್ತನೆಯ ಶತಮಾನದ ರಷ್ಯನ್ ಸಾಹಿತ್ಯ ವಿಮರ್ಶಕ, ಪತ್ರಿಕಾಲೇಖಕ, ಕ್ರಾಂತಿಕಾರಿ, ಪ್ರಜಾತಂತ್ರವಾದಿ; ಭೌತವಾದಿ ಸೌಂದರ್ಯಮೀಮಾಂಸೆಯ ಆದ್ಯ ಪ್ರತಿಪಾದಕ; ಗತಿಶೀಲ ವಾಸ್ತವತಾಪರಿಕಲ್ಪನೆಯ ಪ್ರವರ್ತಕ. ಬೆಲೀನ್‍ಸ್ಕಿ 1811 ಜೂನ್ 1 ರಂದು ರಷ್ಯಾದಲ್ಲಿ ಜನಿಸಿದ. ತಂದೆ ಗ್ರಾಮಾಂತರ ವೈದ್ಯ. ಬೆಲೀನ್‍ಸ್ಕಿ ಜೀವಿಸಿದ್ದು ಮೂವತ್ತೇಳು ವರ್ಷ ಮಾತ್ರ. ಆದರೆ, ಈ ಅಲ್ಪಾವಧಿಯಲ್ಲಿ ಅವನು ಸಂಧಿಕಾಲದ ಹೊಸ್ತಿಲ ಮೇಲೆ ನಿಂತಿದ್ದ ಮಾನವ ಸಮಾಜದ ಸಂಕೀರ್ಣ ತಾತ್ತ್ವಿಕ ಸಮಸ್ಯೆಗಳೊಂದಿಗೆ ಸೆಣಸಿ, ಒಂದು ದಶಕಪರ್ಯಂತ ಸತ್ಯಶೋಧನೆಯ ಮಾರ್ಗದಲ್ಲಿ ತೊಳಲಾಡಿ, ಸಾಹಿತ್ಯಕ ಮಾಧ್ಯಮದಲ್ಲಿ ತನ್ನ ಚಿಂತನೆಯನ್ನು ವ್ಯಾಪಕವಾಗಿ ಬೆಳೆಸಿಕೊಂಡು, ಕೊನೆಗೆ ವಿಶ್ವ ಸಾಹಿತ್ಯದಲ್ಲಿ ಗತಿಶೀಲ ವಾಸ್ತವತಾ ಪರಿಕಲ್ಪನೆಯ ಪ್ರವರ್ತಕನೇ ಆದ. ಆರಂಭದಲ್ಲಿ ಆದರ್ಶವಾದದ ತತ್ತ್ವ ಚಿಂತನೆಯಿಂದ ಪ್ರಭಾವಿತನಾಗಿ, ಕ್ರಮೇಣ ಅದರ ವೈಫಲ್ಯವನ್ನು ಕಂಡುಕೊಂಡು, ಭೌತದರ್ಶನದ ನೆಲೆಯಲ್ಲಿ ಮಾನವತಾ-ಆಶಯ ಪ್ರಧಾನವಾದ ಸೌಂದರ್ಯ ಮೀಮಾಂಸೆಯನ್ನು ಪ್ರತಿಪಾದಿಸಿದ. ಬೆಲೀನ್‍ಸ್ಕಿಯ ಸೌಂದರ್ಯ ಮೀಮಾಂಸೆಯ ಪೂರ್ಣ ಸ್ವರೂಪ ಅರಿಯಲು ಅದು ವಿಕಸಿಸಲು ಕಾರಣವಾದ ಹತ್ತೊಂಬತ್ತನೆಯ ಶತಮಾನದ ಐತಿಹಾಸಿಕ-ಸಾಮಾಜಿಕ ಹಿನ್ನೆಲೆಯ ಪರಿಚಯ ಅಗತ್ಯವಾಗಿರುತ್ತದೆ. 

	ಮಾನವೇತಿಹಾಸದಲ್ಲಿ ಹತ್ತೊಂಬತ್ತನೆಯ ಶತಮಾನ ಒಂದು ಪರ್ವಕಾಲ ಎನ್ನಬಹುದು. ಪಶ್ಚಿಮ ಯೂರೊಪಿನ ಅನೇಕ ದೇಶಗಳಲ್ಲಿ ಐತಿಹಾಸಿಕ-ಸಾಮಾಜಿಕ ಪ್ರಭಾವಗಳಿಗೆ ಸ್ಪಂದಿಸಿ, ಕಳೆದ ಶತಮಾನದಲ್ಲಿ ನಡೆದ ಚರಿತ್ರಾರ್ಹ ಘಟನೆಗಳು ಮಾನವೇತಿಹಾಸವನ್ನೇ ಮಗಚಿಹಾಕಿ ಹೊಸಬೆಳಕು ಕಾಣಲು ಹವಣಿಸುತ್ತ ಸಾಗಿದ ಹೊಸ ಹೊಸ ಮಾನವತಾ ವಿಚಾರಗಳ ಅಭಿವ್ಯಕ್ತಿಗೆ ಕಾರಣವಾಗಿ, ಇಂದಿಗೂ ಸಮಗ್ರ ಮಾನವಕೋಟೆಯ ಮೇಲೆ ತಮ್ಮ ಪ್ರಭಾವ ಬೀರುತ್ತಿವೆ. ಈ ಚರಿತ್ರಾರ್ಹ ಘಟನೆಗಳೆಂದರೆ ಊಳಿಗಮಾನ್ಯದ ಅಳಿವು, ಬಂಡವಾಳಶಾಹಿಯ ಉಗಮ, ಪ್ರಜಾಪ್ರಭುತ್ವದ ಪರಿಕಲ್ಪನೆ, ಕಾಲ್ಪನಿಕ ಸಮಾಜವಾದದ ವಿಚಾರಗಳು, ಕ್ರಾಂತಿಕಾರಿ ಪ್ರಜಾತಂತ್ರದ ಹೋರಾಟ, ಸಮಾಜವಾದದ ಚಿಂತನೆ ಮುಂತಾದ ಜಾಗತಿಕ ಹಂತಗಳು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಹೊಸ ವಿಚಾರಗಳು ಮೂಲಭೂತ ಮಾನವತಾ-ಆಶಯವನ್ನು ಗುರುತಿಸಿದುವು. 

	ಐತಿಹಾಸಿಕವಾಗಿ ಹಿಂದುಳಿದಿದ್ದ ಜರ್ಮನಿ, ರಷ್ಯಾ ದೇಶಗಳಲ್ಲಿ ಊಳಿಗಮಾನ್ಯ ಪದ್ಧತಿ ಇನ್ನೂ ಉಳಿದುಕೊಂಡಿತ್ತಲ್ಲದೆ ನಿರಂಕುಶ ಪ್ರಭುತ್ವ ಬೇರೂರಿ ಬಂಡವಾಳಶಾಹಿಯಾದರೂ ಸಹಜವಾಗಿ ಬೆಳೆಯುವುದು ಸಾಧ್ಯವಿರಲಿಲ್ಲ. ಅಕ್ಕ ಪಕ್ಕದ ದೇಶಗಳಲ್ಲಿ ಪ್ರಚಲಿತವಾಗಿದ್ದ ಐತಿಹಾಸಿಕ ಘಟನೆಗಳ ಪ್ರಭಾವ ಈ ದೇಶಗಳ ಜನತೆಯ ಮೇಲೆ ಪ್ರಬಲವಾಗಿದ್ದು ಹೊಸ ವಿಚಾರಗಳ ಉಗಮಕ್ಕೆ ಆಹ್ವಾನ ಈಯುವಂತಿತ್ತು. 

	ಪ್ಲೋಟೋನಿಂದ ಬೆಳೆದು ಬಂದಿದ್ದ ಆದರ್ಶವಾದದ ಪಾಶ್ಚಾತ್ಯ ತತ್ತ್ವ ಚಿಂತನೆ ಈ ಸಂಧಿಕಾಲದ ಹೊಸ ಸತ್ಯವನ್ನು ಒಳಗೊಂಡು ಮುನ್ನಡೆಯಲು ಆಶಕ್ತವಾದ ಘಟ್ಟವನ್ನೇ ತಲಪಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ತತ್ತ್ವ ಚಿಂತನೆಯ ತವರೆನಿಸಿದ್ದ ಜರ್ಮನಿಯಲ್ಲಿ ಧ್ಯೇಯವಾದಿ ತತ್ತ್ವವಾದ ಕಾಂಟ್‍ನಿಂದ (1724-1804) ಆರಂಭವಾಗಿ ಹೆಗೆಲ್‍ನಲ್ಲಿ (1770-1831) ಬಹುಮುಖವಾಗಿ ಬೆಳೆದು ಬದಲಾಗುತ್ತಿದ್ದ ವಸ್ತುಸ್ಥಿತಿಯನ್ನು ತಾತ್ತ್ವಿಕವಾಗಿ ಅರ್ಥವಿಸುವ ಚಿಂತನೆಯಲ್ಲಿ ತೊಡಗಿತ್ತು. 

	ಹೆಗೆಲ್‍ನ ದ್ವಂದ್ವ ಹೇತುಕ ಪರಿಣಾಮವಾದ ತಾರ್ಕಿಕ ಗತಿಶೀಲತೆಯ ಪರಾಕಾಷ್ಠೆ ಮುಟ್ಟಿ ಆದರ್ಶವಾದಕ್ಕೆ ಒಂದು ಹೊಸ ಆಯಾಮವನ್ನೇ ಕಲ್ಪಿಸಿತು. ಈ ಜಗತ್ತಿನ ಸಂಗತಿಗಳೆಲ್ಲ ಪೂರ್ಣತೆಯತ್ತ ನಿರಂತರ ಚಲನೆಯಲ್ಲಿ ಸಾಗುತ್ತಿರುವ ಸನಾತನ ದಿವ್ಯಭಾವನೆಯೊಂದರ ಅಭಿವ್ಯಕ್ತಿ, ಈ ಯಾವುದೇ ಸಂಗತಿಯೂ ಪೂರ್ಣತೆಯ ಒಂದು ಸಂಚಾರಿ ಭಾವ; ಅದು ತನ್ನ ಪೂರ್ಣತೆ ಸಾಧಿಸಲು ಅದರ ಗರ್ಭದಲ್ಲೇ ತನ್ನ ವಿರುದ್ಧದ ಸ್ವರೂಪವನ್ನು ಬೀಜರೂಪದಲ್ಲಿರಿಸಿಕೊಂಡು ಚಲಿಸುತ್ತ ಬೆಳೆಯುತ್ತ ಹೋಗುತ್ತದೆ; ಬೀಜ ಬೆಳೆದಂತೆಲ್ಲ ಹಳತು ನಶಿಸಿ ಅದರ ಗರ್ಭದಿಂದಲೇ ಹೊಸತರ ಜನನವಾಗುತ್ತದೆ. ಈ ಚಲನೆಯಾದರೂ ಅಪೂರ್ಣದಿಂದ ಪೂರ್ಣ, ಅಸಂಗತದಿಂದ ಸಂಗತ, ಕುರೂಪದಿಂದ ಸುಂದರ, ಅನೈತಿಕದಿಂದ ನೈತಿಕ ಹೀಗೆ ಕೆಳಹಂತದಿಂದ ಊಧ್ರ್ವಮುಖವಾಗಿ ವಿಕಸಿಸುತ್ತ ಮುನ್ನಡೆಯ ತಕ್ಕದ್ದು ಎಂದು ಪ್ರತಿಪಾದಿಸಿದ ಹೆಗೆಲ್‍ನ ಆದರ್ಶವಾದ ಚಲನೆ, ದ್ವಂದ್ವಗಳ ಸಮನ್ವಯ ಮತ್ತು ಬದಲಾವಣೆಗಳ ಪರಿಕಲ್ಪನೆಯನ್ನೊಳಗೊಂಡು ಮೇಲ್ನೋಟಕ್ಕೆ ಪ್ರಗತಿಶೀಲವೆಂದು ಭಾಸವಾಗುತ್ತಿತ್ತು. 

	ಯಾವುದೇ ಸಂಗತಿಯಲ್ಲೂ ಸೌಂದರ್ಯದ ಬೀಜಾಂಕುರ ಮೊಳೆತಿದೆ. ಅದನ್ನು ಗುರುತಿಸಿ ಪರಿಣಾಮದಲ್ಲಿ ಸೌಂದರ್ಯದ ಪೂರ್ಣಸ್ವರೂಪ ಕಾಣುವುದೇ ಸೃಜನಶೀಲ ಪ್ರತಿಭೆ ಎನ್ನುವ ಸೌಂದರ್ಯಮೀಮಾಂಸೆಗೆ ಹೆಗೆಲ್‍ನ ಭಾವವಾದ ಪ್ರೇರಕವಾಗಿತ್ತು. 

	ಹೆಗೆಲ್‍ನ ದೃಷ್ಟಿಯಲ್ಲಿ ಇತಿಹಾಸದ ಘಟನೆಗಳು ಒಂದು ಸನಾತನ ದಿವ್ಯಭಾವನೆಯ ಸದಾಶಯದ ಚಲನೆ ಮಾತ್ರವಾಗಿದ್ದುವು. ಇತಿಹಾಸ, ಸಮಾಜಗಳ ವಸ್ತುಸ್ಥಿತಿಯ ಪಾತ್ರ ಇದರಲ್ಲಿ ಏನೂ ಇಲ್ಲ ಎನ್ನುವ ಭಾವವಾದ ಹೆಗೆಲ್‍ನದಾಗಿತ್ತು. ಪರಿಣಾಮವಾಗಿ ಹೆಗಲ್ ಇತಿಹಾಸ ನಡೆದದ್ದನ್ನು ನಡೆದಂತೆಯೇ ತಿದ್ದಿಟ್ಟು, ಅದರ ಮೇಲೆ ದಿವ್ಯಭಾವನೆಯ ಮುಸುಕು ಹಾಕಿ ವ್ಯಾಖ್ಯೆ ನೀಡುವ ತಾತ್ತ್ವಿಕನೇ ಆದ. 

	ಹೆಗೆಲ್‍ನ ತಾತ್ತ್ವಿಕ ಚಿಂತನೆ ಆರಂಭದಲ್ಲಿ ಯೂರೊಪಿನ ಬುದ್ಧಿಜೀವಿ ಯುವ ಪೀಳಿಗೆಯ ಮೇಲೆ ವ್ಯಾಪಕ ಪ್ರಭಾವ ಬೀರಿತು. ಜರ್ಮನಿಯಲ್ಲಿ ಯುವ ಹೆಗೆಲಿಯನ್ನರ ಒಂದು ಗುಂಪೇ ಹುಟ್ಟು ಉದಾತ್ತ ವಿಚಾರಗಳ ಚಿಂತನೆಯಲ್ಲಿ ತೊಡಗಿತ್ತು. 

	ರಷ್ಯಾದೇಶ ಜರ್ಮನಿಗಿಂತಲೂ ಹಿಂದುಳಿದಿತ್ತು. ಮೊದಲ ನಿಕೋಲಾಸ್‍ನ ನಿರಂಕುಶ ದಬ್ಬಾಳಿಕೆಯೊಂದಿಗೆ ಜೀತಪದ್ಧತಿಯೂ ಸೇರಿ ಜನತೆ ಅಪಾರ ಶೋಷಣೆಗೀಡಾಗಿದ್ದ ಕಾಲ ಆದಾಗಿತ್ತು. ರಷ್ಯಾದ ಜನತೆ ತನ್ನದೇ ಆದ ತತ್ತ್ವ ಚಿಂತನೆಯನ್ನು ಬೆಳೆಸಿಕೊಂಡಿರಲಿಲ್ಲ; ಮತಧರ್ಮವಾದರೂ ಆಳವಾಗಿ ಬೇರು ಬಿಟ್ಟಿರಲಿಲ್ಲ. ಹೀಗಾಗಿ ಜರ್ಮನಿಯ ತತ್ತ್ವಚಿಂತನೆಯೇ ಅಂದಿನ ರಷ್ಯಾದ ಯುವಪೀಳಿಗೆಯ ಮೇಲಣ ಪ್ರಧಾನ ಪ್ರಭಾವವಾಗಿತ್ತು. 

	ರಷ್ಯಾದಲ್ಲಿ, ಕಳೆದ ಶತಮಾನದ ತರುಣದಲ್ಲಿ, ನಿರಂಕುಶಪ್ರಭುತ್ವ ಮತ್ತು ಜೀನಪದ್ಧತಿಗಳ ವಿರುದ್ಧ ಮೊದಲ ಹೋರಾಟ ನಡೆಸಿದವರೆಂದರೆ ಕುಲೀನವರ್ಗದ ಶ್ರೀಮಂತರು. ಈ ಹಿಂದುಳಿದ ಪರಿಸ್ಥಿತಿಯಲ್ಲಿ ವಿಜ್ಞಾನದ ಪ್ರಗತಿಯೂ ಜನತೆಗೆ ಎಟುಕಲಾರದೆಂದು ಅವರು ಮನಗಂಡು ಮೊದಲ ನಿಕೊಲಾಸ್ ಗದ್ದುಗೆ ಏರುವ ಹೊತ್ತಿಗೆ ಒಂದು ಬಂಡಾಯವನ್ನೇ ನಡೆಸಿದರು. 1825 ಡಿಸೆಂಬರ್ 14ರಂದು ನಡೆದ ಈ ಬಂಡಾಯವನ್ನು ನಿಕೊಲಾಸ್ ಪೂರ್ಣವಾಗಿ, ಅತ್ಯಂತ ಅಮಾನುಷ ರೀತಿಯಲ್ಲಿ, ಹತ್ತಿಕ್ಕಿದ. ಆ ಬಳಿಕ `ಡಿಸೆಂಬ್ರಿಸ್ಟ್ಸ್ ಎಂದು ಪ್ರಸಿದ್ಧರಾಗಿ ಕಣ್ಮರೆಯಾದ. ಈ ಕುಲೀನವರ್ಗದವರ ಹೋರಾಟ ಅಲ್ಲಿಗೆ ಮುಕ್ತಾಯವಾಯಿತು. ಅಲ್ಲಿಂದ ಮುಂದೆ ಕೆಲ ಎಚ್ಚೆತ್ತ ರೈತರೂ ಸೇರಿದಂತೆ ಜನಸಾಮಾನ್ಯರಿಂದ ಪುಟಿದೆದ್ದ ಬುದ್ಧಿಜೀವಿಗಳು ಈ ಹೋರಾಟದ ಸೂತ್ರಗಳನ್ನು ವಹಿಸಿಕೊಂಡರು. ಬೆಲೀನ್‍ಸ್ಕಿ ಈ ಸಂಧಿಕಾಲದ ತಾತ್ತ್ವಿಕ ಚೇತನವೇ ಆದ ಎನ್ನಬಹುದು. 

	ಹೆಗೆಲ್‍ನ ಪ್ರಭಾವದಲ್ಲಿ ಮಾನವತಾ ಕಳಕಳಿಯಿಂದ ಎಳೆ ಹರೆಯದ ಬೆಲೀನ್‍ಸ್ಕಿ ಉದಾತ್ತ ವಿಚಾರಗಳನ್ನು ಬೆಳೆಸಿಕೊಳ್ಳುತ್ತ ಬಂದ. ಶಾಲಾವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ 1829ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯ ಸೇರಿದ. ವಿದ್ಯಾರ್ಥಿ ದೆಸೆಯಲ್ಲೇ ` ದ್ಮಿತ್ರಿ ಕಾಲಿನಿನ್ ' ಎಂಬ ನಾಟಕ ಬರೆದ. ಜೀತಪದ್ಧತಿಯ ವಿರುದ್ಧ ಸೆಟೆದು ನಿಂತ ತೀವ್ರ ಪ್ರತಿಭಟನೆಯೇ ಆ ನಾಟಕದ ಜೀವನಾಡಿಯಾಗಿತ್ತು. ಇದೇ ಮುಖ್ಯ ಕಾರಣವಾಗಿ, ಅನಾರೋಗ್ಯ ಅನರ್ಹತೆಗಳ ಕುಂಟು ನೆಪ ಹೂಡಿ. 1832ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯದಿಂದ ಅವನ ಉಚ್ಚಾಟನೆ ಆಯಿತು. ಬಳಿಕ 1833 ರಿಂದ ಸಾಹಿತ್ಯ ವಿಮರ್ಶಕನಾಗಿ ಕೊನೆಯುಸಿರೆಳೆಯುವತನಕ ಬೆಲೀನ್‍ಸ್ಕಿ ಲೇಖನದಲ್ಲಿ ತೊಡಗಿದ. ಅವನ ಸಾಹಿತ್ಯಕ ಪ್ರಬಂಧಗಳು 1833ರಿಂದ 1836ರ ತನಕ `ಟೆಲಿಸ್ಕೋಪ್ 1838-39ರಲ್ಲಿ `ಮಾಸ್ಕೊ ಅಬ್ಸರ್ವರ್, 1839-46ರ ಅವಧಿಯಲ್ಲಿ `ಫಾದರ್ ಲ್ಯಾಂಡ್ ನೋಟ್ಸ್ ಮತ್ತು 1846 ರಿಂದ ಜೀವಿತ ಕಾಲದ ಕೊನೆಯತನಕ (1848) `ದಿ ಕಾಂಟೆಂಪೊರರಿ' ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾದುವು. ಈ ಅವಧಿಯ ಲೇಖನಗಳಲ್ಲಿ ಬೆಲೀನ್‍ಸ್ಕಿ ಮೂಲಭೂತ ತಾತ್ತ್ವಿಕ ಚಿಂತನೆಯ ಹಿನ್ನೆಲೆಯಲ್ಲಿ ತನ್ನ ಸಾಹಿತ್ಯಕ ಮೀಮಾಂಸೆ ಬೆಳೆಸಿಕೊಂಡುದನ್ನು ಕಾಣಬಹುದಾಗಿದೆ. ಮೊದಲು ಹೆಗೆಲ್‍ನ ಆದರ್ಶವಾದದ ಪ್ರಭಾವ, ಬಳಿಕ ಹೆಗೆಲ್‍ನ ದ್ವಂದ್ವ ಹೇತುಕ ತಾರ್ಕಿಕ ಗತಿಶೀಲತೆಯ ಅನ್ವಯಿಕ ಪ್ರಕ್ರಿಯೆಯಲ್ಲಿ ಭೌತತತ್ತ್ವದ ಆಧಾರದ ಮೇಲೆ ಮಾನವತಾ-ಆಶಯದಿಂದ ಕೂಡಿದ ಸೌಂದರ್ಯಮೀಮಾಂಸೆ ಮತ್ತು ಅದರ ಫಲಶ್ರುತಿಯಾಗಿ ವಾಸ್ತವತಾಪರಿಕಲ್ಪನೆಯ ಪ್ರತಿಪಾದನೆ-ಹೀಗೆ ಹಂತ ಹಂತವಾಗಿ ಬೆಳೆದ ಬೆಲೀನ್‍ಸ್ಕಿಯ ಸೌಂದರ್ಯಮೀಮಾಂಸೆ ಹತ್ತೊಂಬತ್ತನೆಯ ಶತಮಾನದ ಎಲ್ಲ ಜಾಗತಿಕ ವಿಚಾರಗಳ ಫಲಶ್ರುತಿಯನ್ನು ಸಾಹಿತ್ಯಕ ಮಾಧ್ಯಮದಲ್ಲಿ ಅಭಿವ್ಯಕ್ತಗೊಳಿಸುವ ಸತ್ತ್ವದಿಂದ ಕೂಡಿತ್ತು. 

	1834-36ರ ಅವಧಿಯಲ್ಲಿ ಹೆಗೆಲ್‍ನ ಪ್ರಭಾವದಲ್ಲಿ ಬೆಲೀನ್‍ಸ್ಕಿ ಉದಾತ್ತ ವಿಚಾರಗಳನ್ನು ಬೆಳಸಿಕೊಂಡದನ್ನು ಕಾಣಬಹುದಾಗಿದೆ: 

	``ಅನಂತ ವೈವಿಧ್ಯದಲ್ಲಿ ಪರಮ ಏಕತೆಯ ಮಹಾಕೌತುಕವಾಗಿ ಅಗಣಿತರೂಪಗಳಲ್ಲಿ ಅಭಿವ್ಯಕ್ತಗೊಳ್ಳುವ ಈ ಅಪಾರ ಸುಂದರ ದಿವ್ಯ ಜಗತ್ತು ಏಕಮಾತ್ರ ದಿವ್ಯಭಾವನೆಯ (ಏಕೈಕ ಸನಾತನ ದೇವರಭಾವನೆಯ) ಉಸಿರಲ್ಲದೆ ಬೇರೇನೂ ಅಲ್ಲ... ಈ ಭಾವನೆಗೆ ವಿಶ್ರಾಂತಿಯೆಂಬುದೇ ಇಲ್ಲ; ಇದು ಸತತವಾಗಿ ನಾಶ ಮಾಡಲು ಸೃಷ್ಟಿಸುತ್ತಿರುತ್ತದೆ ಮತ್ತು ಸೃಷ್ಟಿಸುವ ಸಲುವಾಗಿ ನಾಶಮಾಡುತ್ತಿರುತ್ತದೆ.	``ಸನಾತನಭಾವನೆಯ ನೈತಿಕ ಚೈತನ್ಯದ ಅಭಿವ್ಯಕ್ತಿ ಕಾಣುವುದು ಒಳಿತು-ಕೆಡಕು, ಪ್ರೇಮ-ಸ್ವಾರ್ಥಗಳ ನಡುವಣ ಹೋರಾಟದಲ್ಲಿ..

	``ಕಲೆಯ ಉದ್ದೇಶ ಮತ್ತು ಗುರಿಗಳೇನು? ಪದ-ಧ್ವನಿ-ರೇಖೆಗಳಲ್ಲಿ ಪ್ರಕೃತಿಯ ಸರ್ವವ್ಯಾಪಿ ಚೈತನ್ಯದ ಭಾವನೆಯನ್ನು ಚಿತ್ರಿಸಿ ಪ್ರತಿಫಲಿಸುವುದು; ಕಲೆಯ ಏಕೈಕ ಶಾಶ್ವತ ವಿಷಯವೆಂದರೆ ಇದೇ ! ಪ್ರಕೃತಿಯ ಸೃಜನಶೀಲ ಪ್ರತಿಫಲನವೇ ಕಾವ್ಯಸ್ಫೂರ್ತಿ.	ಹೀಗೆ ಆರಂಭದಲ್ಲೇ ಬೆಲೀನ್‍ಸ್ಕಿ ಹೆಗೆಲ್‍ನ ಆದರ್ಶವಾದವನ್ನು ಯಾವ ಆಧ್ಯಾತ್ಮಿಕ ಅತಿರೇಕಕ್ಕೂ ಎಡೆಗೊಡದೆ, ಪ್ರಕೃತಿಗೆ ಅನ್ವಯಿಸಿ ಅದರಲ್ಲಿ ದ್ವಂದ್ವಗಳ ತಾರ್ಕಿಕ ಗತಿಶೀಲತೆಯ ಹೇತುಕ್ರಿಯೆಯ ಚಲನೆಯನ್ನು ಅರ್ಥವಿಸಿಕೊಂಡ. ಆದರೆ ಪ್ರಕೃತಿಯಲ್ಲಿ ಸಹಜಸಂಗತಿಯಾಗಿದ್ದ ಪ್ರಗತಿ ತನ್ನ ಸಮಕಾಲೀನ ಮಾನವ ಸಮಾಜದಲ್ಲಿ ಕಾಣುವಂತಿರಲಿಲ್ಲ. ನಿರಂಕುಶ ಪ್ರಭುತ್ವಶಾಹಿ ಮತ್ತು ಜೀತ ಪದ್ಧತಿಗಳ ಇಕ್ಕಳದಲ್ಲಿ ಜನತೆ ಅಪಾರ ದೌರ್ಜನ್ಯ ಅನ್ಯಾಯಗಳಿಗೆ ತುತ್ತಾಗಿ ಸೊರಗುವಂತಾಗಿತ್ತು. ಈ ಪರಿಸ್ಥಿತಿಯನ್ನು ನಿವಾರಿಸುವಂಥ ಯಾವುದೇ ದಿವ್ಯ ಭಾವನೆಯ ಸೂಚನೆಯೂ ವಸ್ತುಸ್ಥಿತಿಯಲ್ಲಿ ಕಾಣುವಂತಿರಲಿಲ್ಲ. ಉದಾತ್ತ ವಿಚಾರಗಳು ವಾಂಛಿತ ಮಾನಸಿಕ ಸಂತೋಷ ಕೊಡಬಲ್ಲವಾಗಿದ್ದವೇ ವಿನಾ ವಸ್ತು ಸ್ಥಿತಿಯನ್ನೆಂತೂ ಸುಧಾರಿಸಲು ನೆರವಾಗುವಂತಿರಲಿಲ್ಲ. 

	ತನ್ನ ಕಣ್ಮುಂದೆ ಗರಿಗೆದರಿ ನಿಂತಿದ್ದ ಸಮಾಜವ್ಯವಸ್ಥೆ ನಿಜಕ್ಕೂ ಸತ್ಯ ಸೌಂದರ್ಯಗಳಿಗೆ ಅಪವಾದವೇ ಆಗಿತ್ತೆಂಬುದು ಬೆಲೀನ್‍ಸ್ಕಿಗೆ ಸ್ಪಷ್ಟವಾಯಿತು. ಹಾಗಿದ್ದಲ್ಲಿ ಸತ್ಯ ಯಾವುದು? ಎಂಬ ಪ್ರಶ್ನೆ ಅವನನ್ನು ಸತತವಾಗಿ ಬಾಧಿಸ ತೊಡಗಿತು. 

	1830-40ರ ದಶಕದಲ್ಲಿ ಬೆಲೀನ್‍ಸ್ಕಿ ತೀವ್ರ ಸಾಮಾಜಿಕ ಕಳಕಳಿ ಮಾನವತಾ-ಆಶಯಗಳಿಂದ ಉದ್ವಿಗ್ನನಾಗಿ ಸತ್ಯಶೋಧನೆಯ ಮಾರ್ಗದಲ್ಲಿ ಆಳವಾಗಿ ಚಿಂತನೆ ಮಾಡಿದ. ಈ ಅವಧಿಯಲ್ಲಿ ಅವನು ಬರೆದ ಸಾಹಿತ್ಯಕ ಲೇಖನಗಳು ಹತ್ತೊಂಬತ್ತನೆಯ ಶತಮಾನದ ಮಾನವತಾ-ಆಶಯದ ದಾರ್ಶನಿಕ ದಾಖಲೆಗಳೇ ಆಗಿವೆಯೆನ್ನಬಹುದು. ಆಗಿನ ಅವನ ಚಿಂತನೆಯ ಹರಹು ದಿಗ್ಭ್ರಮೆಗೊಳಿಸುವಂಥ ಪರಿಣಾಮಕಾರಿ ವ್ಯಾಪ್ತಿಯಲ್ಲಿ ಸಾಗಿತು. ಸಮಗ್ರ ಮಾನವೇತಿಹಾಸವನ್ನೇ ಅವನು ತಿರುವಿ ಹಾಕಿದ; ಪ್ಲೋಟೋನಿಂದ ಹೆಗೆಲ್‍ನವರೆಗಿನ ಆದರ್ಶವಾದಿ ತತ್ತ್ವಚಿಂತನೆಯನ್ನು ಆಳವಾಗಿ ಪರಿಶೀಲಿಸಿ ಅತೃಪ್ತಿ ಅಸಮಾಧಾನಗಳನ್ನೇ ತಂದುಕೊಂಡ. ಪ್ರಷ್ಯನ್ ಅರಸೊತ್ತಿಗೆಯ ಪೂರ್ಣವಿಕಾಸವೇ ಮಾನವಸಮಾಜ-ವಿಕಾಸದ ಪರಾಕಾಷ್ಠೆಯೆಂದು ಮಂಗಳ ಹಾಡಿದ ಹೆಗೆಲ್‍ನ ನಿರ್ಣಯ ಅವನಲ್ಲಿ ಜುಗುಪ್ಸೆಯನ್ನೇ ಹುಟ್ಟಿಸಿತು. 

	ಇದೇ ಅವಧಿಯಲ್ಲಿ ಅವನು ಪುರಾತನ ಗ್ರೀಕ್ ಮಹಾಕಾವ್ಯಗಳಿಂದ ಮೊದಲು ಗೊಂಡು ಸಮಕಾಲೀನ ಜರ್ಮನ್, ಫ್ರೆಂಚ್ ಹಾಗೂ ಇಂಗ್ಲಿಷ್ ಲೇಖಕರ ಸಾಹಿತ್ಯ ಕೃತಿಗಳನ್ನೂ ಪಾಶ್ಚಾತ್ಯ ಸೌಂದರ್ಯಮೀಮಾಂಸಕರ ಸಮಾಜ ತತ್ತ್ವವೇತರ ಮತ್ತು ಕಾಲ್ಪನಿಕ ಸಮಾಜವಾದಿಗಳ ವಿಚಾರಗಳನ್ನೂ ಆಳವಾಗಿ ಮತ್ತು ವಿಮಾರ್ಶಾತ್ಮಕವಾಗಿ ವ್ಯಾಸಂಗ ಮಾಡಿ ಟಿಪ್ಪಣೆಗಳನ್ನು ಬರೆದ. ಜರ್ಮನಿಯ ಮಾರ್ಟಿನ್ ಲೂಥರ್ (1483-1546), ವಾಲ್ಟೇರ್ (1694-1778) ಮುಂತಾದ ಫ್ರಾನ್ಸಿನ ಎನ್ಸೈಕ್ಲೊಪೀಡಿಸ್ಟರ ನವೋದಯ ವಿಚಾರಗಳಿಂದ ಪ್ರಭಾವಿತನಾದ. ಜರ್ಮನಿಯ ಆರಂಭದ ಭೌತತತ್ತ್ವವೇತ್ತರಾದ ಫಿಕ್ಟೆ (1762-1814), ಫೋಯರ್‍ಬಾಕ್ (1804-72) ಮುಂತಾದವರ ತತ್ತ್ವಚಿಂತನೆಯನ್ನು ತನ್ನದೇ ಆದ ಮಾನವತಾ ದೃಷ್ಟಿಯಿಂದ ವಿವೇಚಿಸಿದ.

	ಅರಸೊತ್ತಿಗೆಯ ಸಂಗತಿಗಳು, ಅವುಗಳ ಏಳುಬೀಳುಗಳು ಮಾನವೇತಿಹಾಸದ ಮುಖ್ಯ ವಿಷಯಗಳಲ್ಲ. ಮಾನವಸಮಾಜ ಮಾನವತಾಗತಿಶೀಲತೆಯನ್ನು ಕಳೆದುಕೊಂಡು ಪ್ರತಿಗಾಮಿಯಾಗುತ್ತ ಬಂದ ಐತಿಹಾಸಿಕ ಘಟ್ಟಗಳಲ್ಲಿ ಅದರೊಂದಿಗೆ ಮಾನವತಾ ಆಶ್ರಯದಿಂದ ಸೆಣಸಾಡಿ, ಕಳಚಿ ಬಿದ್ದಿದ್ದ ಪ್ರಗತಿಯ ಕೊಂಡಿಗಳನ್ನು ಮತ್ತೊಮ್ಮೆ ಕೂಡಿಸಿದ ಸಮಾಜತತ್ತ್ವವೇತ್ತರು, ಅವರ ಕ್ರಿಯಾಶೀಲವಿಚಾರಗಳು, ಅವಕ್ಕಾಗಿ ದನಿ ಎತ್ತಿದ ಕವಿಗಳು, ಲೇಖಕರು-ಇವುಗಳಲ್ಲೇ ಇತಿಹಾಸದ ಜೀವನಾಡಿ ಇದೆ ಎಂಬುದನ್ನು ಸ್ಪಷ್ಟವಾಗಿ ಮನಗಂಡ. 

	1841ರ ಹೊತ್ತಿಗೆ ಬೆಲೀನ್‍ಸ್ಕಿ ಹೆಗೆಲ್‍ನ ಆದರ್ಶವಾದದ ಪ್ರಭಾವದಿಂದ ಹೊರಬಂದನೆನ್ನಬಹುದು. ಆ ವರ್ಷ ಮಾರ್ಚ್ 1 ರಂದು ವಿ.ಪಿ.ಬೊತ್ಕೀನ್‍ಗೆ ಬರೆದ ಪತ್ರದಲ್ಲಿ ಹೆಗೆಲ್‍ನನ್ನು ಬಲು ಮಾರ್ಮಿಕವಾಗಿ ಬೆಲೀನ್‍ಸ್ಕಿ ನಿರಾಕರಿಸಿರುವುದನ್ನು ಕಾಣಬಹುದಾಗಿದೆ: 

	``ಬಾಳ್ವೆಯ ಸತ್ಯಗಳನ್ನು ಹೆಗೆಲ್ ಶ್ಮಶಾನದ ಮೇಲಣ ಗಾಳಿಯಲ್ಲಿ ಎಲುಬಿನ ಕೈಗಳನ್ನು ಒಂದಕ್ಕೊಂದು ಮಿಲಾಯಿಸಿ ರುದ್ರನರ್ತನ ಮಾಡುವ ಪ್ರೇತಗಳನ್ನಾಗಿ ಇರಿಸಿರುವುದಂತೂ ದಿಟ.

	``ನೈತಿಕತೆಯನ್ನು ಕುರಿತ ಹೆಗೆಲ್‍ನ ವಾದವೆಲ್ಲ ಅಪ್ಪಟ ನಿರರ್ಥಕ, ಏಕೆಂದರೆ ಚಿಂತನೆಯ ವಾಸ್ತವ ಸೀಮೆಯಲ್ಲಿ ಯಾವ ನೈತಿಕತೆಯೂ ಕಾಣುವಂತಿಲ್ಲ. 

	``ಹೆಗೆಲ್ ನನಗೆ ಹೇಳುವುದಿದು: ನಿನ್ನ ಆತ್ಮಶಕ್ತಿಯ ಸರ್ವಸ್ವವನ್ನೂ ನಿನ್ನ ಮುಕ್ತ ಆತ್ಮರತಿಗಾಗಿ ಬೆಳೆಸಿಕೊ; ನಿನ್ನನ್ನು ಸಂತೈಸಿಕೊಳ್ಳಬೇಕಾದರೆ ರೋದಿಸು, ಸಂತಸ ಬೇಕೆಂದರೆ ದುಃಖಿಸು, ಪೂರ್ಣತೆಗಾಗಿ ಹವಣಿಸು, ವಿಕಾಸದ ಏಣಿಯ ಕೊನೆಯ ಮೆಟ್ಟಲನ್ನೇರು; ನಡುವೆ ಎಲ್ಲಾದರೂ ಎಡವಿದೆಯೋ, ಥೂ ನಿನ್ನ! ಬಿದ್ದೆ ಪ್ರಪಾತಕ್ಕೆ, ಶನಿ ತೊಲಗಿದಂತಾಯಿತು. ಉಹುಂ ಹೆಗೆಲ್, ಸಾಕು ನಿನ್ನ ಸಹವಾಸ.. ನಾನು ವಿಕಾಸದ ಏಣಿಯ ತುತ್ತತುದಿ ಏರಿ ನಿಂತರೂ ನಿನ್ನನ್ನು ಬಿಡುವುದಿಲ್ಲ. ಇತಿಹಾಸದ ಪರಿಸ್ಥಿತಿಗಳಿಗೆ, ಆಕಸ್ಮಿಕ ಮೂಢನಂಬಿಕೆ ಧರ್ಮವಿಚಾರಣ ಸಭೆ ಮುಂತಾದವಕ್ಕೆಲ್ಲ ಬಲಿಯಾಗಿರುವ ಯಜ್ಞ ಪಶುಗಳ ಸಲುವಾಗಿ ಅಲ್ಲಿಯೂ ನಾನು ನಿನ್ನ ಬೆನ್ನು ಹತ್ತುತ್ತೇನೆ.

	1841 ಸೆಪ್ಟೆಂಬರ್ 8 ರಂದು ಬರೆದ ಮತ್ತೊಂದು ಪತ್ರದಲ್ಲಿ ಹೆಗೆಲ್‍ನ ದಿವ್ಯ ಭಾವನೆಯನ್ನು ಬೆಲೀನ್‍ಸ್ಕಿ ನಿರಾಕರಿಸಿ ಅದರ ವೈಫಲ್ಯವನ್ನು ಮಾನದಂಡದಿಂದ ಪರಿಣಾಮಕಾರಿಯಾಗಿ ಧ್ವನಿಸಿರುವುದನ್ನು ಕಾಣಬಹುದಾಗಿದೆ: 

	``ಸಾಮಾಜಿಕತೆ, ಸಾಮಾಜಿಕತೆ-ಇಲ್ಲವೇ ಸಾವು! ಅದೇ ನನ್ನ ಧ್ಯೇಯ. ವೈಯಕ್ತಿಕತೆ ಗಾಸಿಗೊಂಡಿರುವಾಗ ವಿಶ್ವವ್ಯಾಪಿ ದಿವ್ಯಭಾವನೆಯನ್ನು ಕಟ್ಟಿಕೊಂಡು ನನಗೇನಾಗಬೇಕು? ಜನ ಕೊಳಚೆಯಲ್ಲಿ ಹೊರಳಾಡುತ್ತಿರುವಾಗ, ಭೂಮಿಯಲ್ಲಿಯ ಪ್ರತಿಭೆ ಸ್ವರ್ಗದಲ್ಲಿ ಉಸಿರಾಡುತ್ತಿರುವುದಾದರೆ ನನಗೇನಾಗಬೇಕದರಿಂದ? ಕಲೆ, ಮತಧರ್ಮ, ಇತಿಹಾಸಗಳಲ್ಲಿ ಮಾತ್ರ ಕಾಣುವ ಭಾವನಾಪ್ರಪಂಚದಿಂದ-ಮಾನವಕೋಟಿಯ ನನ್ನ ಸೋದರರೊಡನೆ ಹಂಚಿಕೊಳ್ಳಲಾಗದ ಭಾವನೆ ಅದಾದರೆ-ನನಗೇನಾಗಬೇಕದರಿಂದ?	1841ರ ಹೊತ್ತಿಗೆ ಈ ಎಲ್ಲ ವ್ಯಾಸಂಗ ಚಿಂತನೆಗಳ ಹಿನ್ನೆಲೆಯಲ್ಲಿ ಡಿಸೆಂಟ್ರಿಸ್ಟರ ಜಾಗತಿಕ ವಿಚಾರಗಳು ಬೆಲೀನ್‍ಸ್ಕಿಯ ಮೇಲೆ ಪ್ರಭಾವ ಬೀರಿದುವು. ಇವೆಲ್ಲಕ್ಕಿಂತ ಮಿಗಿಲಾಗಿ ಅವನ ಒಡನಾಡಿಯಾಗಿದ್ದ ಎ.ಐ.ಹರ್ಜನ್ (1812-70) ಆ ಹೊತ್ತಿಗಾಗಲೇ ಬೆಳೆಸುತ್ತಿದ್ದ ಭೌತತತ್ತ್ವಚಿಂತನೆ ಕುರಿತು ಅವನೊಂದಿಗೆ ನಡೆಸುತ್ತಿದ್ದ ಸಮಾಲೋಚನೆ ಬೆಲೀನ್‍ಸ್ಕಿಯ ಮೇಲೆ ನಿರ್ಣಾಯಕ ಪ್ರಭಾವ ಬೀರಿತೆನ್ನಬಹುದು. 

	1841ರ ಹೊತ್ತಿಗೆ ಬೆಲೀನ್‍ಸ್ಕಿ ಹೆಗೆಲ್‍ನ ಸನಾತನ ದಿವ್ಯಭಾವನೆಯ ಪರಿಕಲ್ಪನೆಯಿಂದ ಪಾರಾಗಿ, ಪರಿಣಾಮಕಾರಿಯಾದ ಹೆಗೆಲ್‍ನ ದ್ವಂದ್ವಹೇತುಕ ತಾರ್ಕಿಕ ಗತಿಸೂತ್ರವನ್ನು ಭೌತವಸ್ತುವಿನ ನಿರಂತರ ಚಲನೆಗೆ ಅನ್ವಯಿಸಿ, ವಸ್ತುಸ್ಥಿತಿಯಲ್ಲಿ ಅಂತರ್ಗತವಾಗಿ ಮೊರೆಯುತ್ತಿರುವ ಮಾನವತಾ-ಆಶಯವೇ ಮೂಲಭೂತ ವಾಸ್ತವತೆಯ ಪರಾಯಣ ಸೂತ್ರವೆಂಬುದನ್ನು ಗುರುತಿಸಿದ. ಹೆಗೆಲ್‍ನ ಗತಿತರ್ಕ ಸೂತ್ರವನ್ನು ` ಕ್ರಾಂತಿಯ ಬೀಜಗಣಿತ ' ಎಂದು ಎ.ಐ.ಹರ್ಜನ್ ಪರಿಗಣಿಸಿದ್ದು ನಿಜಕ್ಕೂ ಬೆಲೀನ್‍ಸ್ಕಿ ಸೌಂದರ್ಯಮೀಮಾಂಸೆಯಲ್ಲಿ ಅನ್ವರ್ಥವಾಯಿತೆನ್ನಬಹುದು. ಹೆಗೆಲ್ ನಿಜಕ್ಕೂ ತರ್ಕಸಂಹಿತೆಯನ್ನು ವಿಜ್ಞಾನದ ಮಟ್ಟಕ್ಕೇರಿಸಿ ಮಾನವಕುಲಕ್ಕೆ ಮಹದುಪಕಾರ ಮಾಡಿರುವನೆಂದು ಬೆಲೀನ್‍ಸ್ಕಿ ಮುಕ್ತ ಕಂಠದಿಂದ ಸಾರಿದ. ಆದರೆ, ಆ ತರ್ಕಸಂಹಿತೆಯನ್ನು ಮಾನವತಾ-ಆಶಯಕ್ಕೆ ಹೂಡದೆ, ದಿವ್ಯಭಾವನೆಗೆ ಅದನ್ನು ಒಳಪಡಿಸಿದ ಹೆಗೆಲ್ ಪ್ರತಿಗಾಮಿ ತಾತ್ತ್ವಿಕನಾದರೆ, ಅದೇ ತರ್ಕಸಂಹಿತೆಯನ್ನು ಭೌತವಸ್ತು ಸ್ಥಿತಿಯ ಚಲನೆಗೆ ಅನ್ವಯಿಸಿದ ಬೆಲೀನ್‍ಸ್ಕಿ ಮಾನವತಾ-ಆಶಯದಿಂದ ಕೂಡಿದ ವಾಸ್ತವತಾ ಸೌಂದರ್ಯ ಮೀಮಾಂಸೆಯ ಪ್ರವರ್ತಕನೇ ಆದ. 

	1841ರಲ್ಲಿ ಬರೆದ `ಕಲೆಯ ಪರಿಭಾವನೆ ಎಂಬ ಲೇಖನವೊಂದರಲ್ಲಿ ಬೆಲೀನ್‍ಸ್ಕಿಯ ವಿಚಾರಗಳು ಭೌತದ ತಿರುವು ಪಡೆದುಕೊಂಡುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ:

	``ಚಿಂತನದ ಜ್ಞಾತೃಜ್ಞೇಯಗಳೆರಡೂ ಒಂದೇ ಮೂಲದಿಂದ ಸಹಜವಾಗಿ ಹುಟ್ಟಿಬಂದು ಅನನ್ಯವಾಗಿರುತ್ತವೆ; ಎಂತಲೇ ಆದಿಭೌತವಸ್ತು ನಮ್ಮ ಭೂಮಿ ಗ್ರಹವಾಗಿ ಪರಿಣಮಿಸಲು ಹವಣಿಸುತ್ತ ಸಾಗಿದ ಪ್ರಪ್ರಥಮ ಚಲನೆ ಹಾಗೂ ಬುದ್ಧಿವಂತ ಮನುಷ್ಯನ ಕಟ್ಟಕಡೆಯ ಯುಕ್ತಿಯುಕ್ತವಾದ ಮಾತು ಇವೆರಡೂ ಅದೆ (ಆದಿಭೌತವಸ್ತುವಿನ) ವಿಕಾಸದ ಬೇರೆ ಬೇರೆ ಹಂತಗಳಲ್ಲಿಯ ಒಂದೇ ಆಸ್ತಿತ್ವ ಆಗಿರುತ್ತದೆ. ಅರಿವು ಹುಟ್ಟಿ ಬೆಳೆಯುವ ನೆಲವೇ ಪ್ರಜ್ಞೆಯ ಸೀಮೆ.	ಮಾನವನೂ ಸೇರಿದಂತೆ ಭೌತವಸ್ತುವಿನ ಚಲನೆಯೇ ಚೈತನ್ಯ; ವಸ್ತುವನ್ನು ಬಿಟ್ಟು ಚೈತನ್ಯವಿಲ್ಲ. ಎಲ್ಲ ಮಾನವಿಕ ವಿಚಾರಗಳೂ ವಸ್ತುಸ್ಥಿತಿಯಿಂದಲೇ ಉಗಮಿಸಿ ಅದರಲ್ಲೇ ಪರ್ಯವಸಾನಗೊಂಡು ಬೆಳೆಯುತ್ತ ಮುನ್ನಡೆಯ ತಕ್ಕದ್ದು ಎಂದು ಪ್ರತಿಪಾದಿಸಿದ ಬೆಲೀನ್‍ಸ್ಕಿ ಪ್ರಗತಿ ಸೂತ್ರದ ಜೀವನಾಡಿಯನ್ನು ವಸ್ತು ಸ್ಥಿತಿಯಲ್ಲೇ ನಿರೂಪಿಸಿದ. ಚಲನೆಯಲ್ಲಿರುವ ವಸ್ತುಸ್ಥಿತಿಯ ಗರ್ಭದಲ್ಲಿ ಅಂತರ್ಗತವಾಗಿ ಮೊರೆಯುತ್ತಿರುವ ಮಾನವತಾ ಚೈತನ್ಯವನ್ನು ಅದಕ್ಕೆ ವಿರುದ್ಧ ಎಳೆಯುವ ಪ್ರತಿಗಾಮಿ ಶಕ್ತಿಗಳಿಂದ ಬೇರ್ಪಡಿಸಿ ವಿವೇಕಿಸುವ ನಿರ್ಣಾಯಕ ದರ್ಶನವೇ ವಾಸ್ತವತೆ ಎಂಬ ಮೂಲಭೂತ ಸೂತ್ರವನ್ನು ಬೆಲೀನ್‍ಸ್ಕಿ ಪ್ರತಿಪಾದಿಸಿದ. ಎಂತಲೇ ವಸ್ತುಸ್ಥಿತಿಯ ಮೇಲ್ಪದರದಲ್ಲಿ ಎದ್ದು ಕಾಣುವ ತೋರ್ಕೆಯ ಸತ್ಯ ಮೂಲಭೂತ ಸತ್ಯವಲ್ಲ; ವಸ್ತುಸ್ಥಿತಿಯಲ್ಲಿ ಅಂತರ್ಗತವಾಗಿ ಮಿಡಿಯುತ್ತಿರುವ ಮಾನವತಾ-ಆಶಯದ ಸಾಧ್ಯತೆಯ ಸತ್ಯವೇ ಮಾನವ ಚೈತನ್ಯದ ಅದಮ್ಯ ಸನಾತನ ಸತ್ಯ, ಅದುವೇ ಪೂರ್ಣ ಸತ್ಯದ ವಿಕಾಸ ಸಂಹಿತೆ ಎಂಬ ಪ್ರಮೇಯವನ್ನು ಅನ್ವಯಿಕವಾಗಿ ನಿರೂಪಿಸಿದ. 

  ``	ಸತ್ಯ ಪುಟಿಯುವುದು ಮಣ್ಣು ನೆಲದಿಂದ ಮತ್ತು ಎಲ್ಲ ಸತ್ಯದ ನೆಲ ಸಮಾಜವೇ ಆಗಿರುತ್ತದೆ ಎಂದು ಬೆಲೀನ್‍ಸ್ಕಿ 1841 ಸೆಪ್ಟೆಂಬರ್ 8 ರಂದು ವಿ.ಪಿ.ಬೊತ್ಕೀನ್‍ಗೆ ಬರೆದ ಪತ್ರದಲ್ಲಿ ನಿರೂಪಿಸಿರುತ್ತಾನೆ. 

	`1847ರ ರಷ್ಯನ್ ಸಾಹಿತ್ಯದ ಒಂದು ಅವಲೋಕನ ಎಂಬ ಲೇಖನದಲ್ಲಿ ಪ್ರಕೃತಿಯ ಸಹಜಸಂಗತಿಯಲ್ಲಿ ಮಾನವಚೇತನ ಉದಾತ್ತತೆಯನ್ನು ಬೆಲೀನ್‍ಸ್ಕಿ ಹೀಗೆ ನಿರೂಪಿಸಿದ್ದಾನೆ. 

	``ಕಲೆಯ ಸನಾತನ ಮಾದರಿಯೆಂದರೆ ಪ್ರಕೃತಿ ಮತ್ತು ಪ್ರಕೃತಿಯಲ್ಲಿ ಅತ್ಯಂತ ಮಹತ್ತ್ವ ಪೂರ್ಣ ಉದಾತ್ತ ವಸ್ತುವೆಂದರೆ ಮಾನವ.	1844ರಲ್ಲೊ ಪೂಷ್ಕಿನ್ನನ `ಇವ್ಗೇನಿ ಅನೇಗಿನ್ ಕುರಿತ ವಿಮರ್ಶಾತ್ಮಕ ಪ್ರಬಂಧದಲ್ಲಿ ಅದಮ್ಯ ಮಾನವ ಚೇತನ ಆತ್ಮಪ್ರತ್ಯಯವನ್ನು ಬೆಲೀನ್‍ಸ್ಕಿ ಎತ್ತಿತೋರಿದ್ದಾನೆ:

	``ಮನುಷ್ಯ ಹುಟ್ಟಿರುವುದು ಒಳಿತಿಗಾಗಿ, ಕೇಡು ಬಗೆಯುವುದಕ್ಕಲ್ಲ; ಬದುಕಿನ ಆನಂದವನ್ನು ಯುಕ್ತವಾಗಿಯೂ ನ್ಯಾಯವಾಗಿಯೂ ಅನುಭವಿಸುವುದಕ್ಕೆ ಹೊರೆತು ಕೆಡುಕೆಸಗಲಿಕ್ಕಲ್ಲ. ಅವನ ಹವಣಿಕೆಗಳು ಸತ್ಯಶೀಲವಾದವು. ಅವನ ಸಹಜ ಪ್ರವೃತ್ತಿ ಉದಾತ್ತವಾದದ್ದು, ಕೆಡಕು ಹುದುಗಿರುವುದು ಮನುಷ್ಯನಲ್ಲಲ್ಲ; ಸಮಾಜ ವ್ಯವಸ್ಥೆಯಲ್ಲಿ, ಏಕೆಂದರೆ ಸಮಾಜ-ಎಂದರೆ ಮಾನವನ ಬೆಳೆವಣಿಗೆಯ ಅವಸ್ಥೆಗಳು-ಇನ್ನೂ ಪರಿಪೂರ್ಣತೆಯನ್ನು ಮುಟ್ಟಿಲ್ಲ.

	ಈ ಅದಮ್ಯ ಮಾನವಚೇತನವನ್ನು ವಸ್ತುಸ್ಥಿತಿಯಲ್ಲಿ ಕಾಣುವುದೇ ಸೃಜನಶೀಲ ಪ್ರತಿಭೆ ಎನ್ನುವ ಕ್ರಿಯಾಶೀಲ ಸೌಂದರ್ಯಮೀಮಾಂಸೆ ಬೆಲೀನ್‍ಸ್ಕಿಯದು. ಬೆಲೀನ್‍ಸ್ಕಿಯ ಮಾತುಗಳಲ್ಲೇ ಹೇಳುವುದಾದರೆ:

	ಸಮಕಾಲೀನ ಕಲೆ ಎಂಥದು ? ಅದೊಂದು ತೀರ್ಪು, ವಿಶ್ಲೇಷಣೆ; ಎಂತಲೇ ವಿಮರ್ಶೆ. ವಿಚಾರಶೀಲ ಘಟಕಾಂಶ ಇದೀಗ ಕಲೆಯ ಘಟಕಾಂಶದಲ್ಲೂ ಅಂತರ್ಗತವಾಗಿದೆ. ನಮ್ಮ ಈ ಕಾಲದಲ್ಲಿ ಕಲಾಕೃತಿ ಯುಗಪ್ರಜ್ಞೆಯ ಮಹತ್ತರ ಅಂತಃ ಪ್ರರೇಣೆಯಿಂದ ಪುಟಿಯದೆ, ಚಿತ್ರಿಸಿಬೇಕೆನ್ನುವ ಮಾತ್ರದಿಂದ ಬದುಕನ್ನು ಚಿತ್ರಿಸಿದಲ್ಲಿ, ಅದು ಸಂಕಟದ ಕೂಗು ಅಥವಾ ಆನಂದೋತ್ಸಾಹ ಮೇಳಗಾನವಾಗಿದ್ದಲ್ಲಿ, ಅದೊಂದು ಪ್ರಶ್ನೆಯಾಗಲಿ, ಪ್ರಶ್ನೆಯೊಂದಕ್ಕೆ ಉತ್ತರವಾಗಲಿ ಆಗದಿದ್ದಲ್ಲಿ ಅದು ನಿರ್ಜೀವವೆನಿಸಿದಂತೆಯೇ.	ಹತ್ತೊಂಬತ್ತನೆಯ ಶತಮಾನದಲ್ಲಿ ವಿರಾಜಮಾನವಾಗಿದ್ದ `ಕಲೆಗಾಗಿ ಕಲೆ ಎಂಬ ಪ್ರತಿಗಾಮಿ ಸಿದ್ಧಾಂತವನ್ನು ಬೆಲೇನ್‍ಸ್ಕಿ ಪರಿಣಾಮಕಾರಿಯಾಗಿ ನಿರಾಕರಿಸುತ್ತ, ಕಲೆಯ ನೈಜ ಸಾಮಾಜಿಕ ಸ್ವರೂಪದ ಇತ್ಯಾತ್ಮಕ ನಿರೂಪಣೆಯನ್ನು ಹೀಗೆ ನೀಡಿರುತ್ತಾನೆ: 

	``ಪ್ರಾಸಪ್ರಣೀತ ರಿಂಗಣಗಳ ಕಾಲ ಆಗಿಹೋಯಿತು, ಮತ್ತೊಂದೂ ಅದು ಮರಳಿಬಾರದು. ಹುರುಳಿಲ್ಲದ ರಾಗೋಲ್ಬಣ ಭಾವುಕತೆಗಳಿಗೀಗ ಮಹತ್ತ್ವವಿಲ್ಲ; ಇವೆರಡಕ್ಕೂ ಬದಲಾಗಿ ಆಳವಾದ ಭಾವನೆಗಳನ್ನೂ ವಿಚಾರಗಳನ್ನೂ ಕಲಾಮಾಧ್ಯಮದಲ್ಲಿ ಅಭಿವ್ಯಕ್ತಗೊಳಿಸುವುದೇ ಇಂದಿನ ಅಗತ್ಯ. ಅದು ಪ್ರಾಸಬದ್ಧವಾಗಿದ್ದರೂ ಸರಿ, ಇಲ್ಲದಿದ್ದರೂ ಸರಿ-ಗಣನೆಗೆ ತೆಗೆದುಕೊಳ್ಳುವಂಥ ವಿಷಯ ಅದೇನಲ್ಲ. ಕಾವ್ಯದಲ್ಲಿಂದು ಯಶಸ್ಸು ಗಳಿಸಲು ಕೇವಲ ಪ್ರತಿಭೆಯೊಂದೇ ಸಾಲದು. ಇತಿಹಾಸ ಪ್ರಜ್ಞೆಯೂ ಅಷ್ಟೇ ಅಗತ್ಯ. ಕವಿ ಈಗ ತನ್ನ ಕಾಲದ ವಾಸ್ತವ ಜಗತ್ತಿನ ಪ್ರಜೆಯಾಗಿರುತ್ತಾನೆ. ಭೂತಕಾಲವೆಲ್ಲ ಅವನಲ್ಲಿ ಬಾಳಬೇಕು. ಅವನು ಮನರಂಜನೆ ನೀಡಬೇಕೆಂಬ ಅಪೇಕ್ಷೆ ಈಗಿನ ಸಮಾಜಕ್ಕಿಲ್ಲ; ಬದಲಾಗಿ ತನ್ನ (ಸಮಾಜದ) ಚೈತನ್ಯಯುಕ್ತ ಆದರ್ಶದ ಬಾಳ್ವೆಯ ಪ್ರತಿನಿಧಿಯಾಗಿ, ಅತ್ಯಂತ ಕಠಿಣ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲ ಮಾರ್ಗದರ್ಶಕನಾಗಿ, ಇತರರಲ್ಲಿ ನೋವು ಯಾತನೆಗಳನ್ನು ಕಂಡುಕೊಳ್ಳುವುದಕ್ಕಿಂತ ಮುನ್ನ ತನ್ನಲ್ಲೆ ಆ ಸಮಾನಾನುಭವ ಹೊರಗೆಡಹಿ ಅವನ್ನು ಕಾವ್ಯರೂಪದಲ್ಲಿ ಪ್ರತಿಫಲಿಸಿ ವೈದ್ಯನಂತೆ ಗುಣಪಡಿಸುವವನಾಗಬೇಕೆಂದು ಸಮಾಜ ಅಪೇಕ್ಷಿಸುತ್ತದೆ.

	ಇಂಗ್ಲಿಷ್ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್‍ನ ಕಾದಂಬರಿಗಳಲ್ಲಿ ಇಂಥ ಕಲಾ ಚೇತನ ಕಂಡ ಬೆಲೀನ್‍ಸ್ಕಿ ಅದನ್ನು ಪ್ರಸ್ತಾಪ ಮಾಡುತ್ತ, ಸೃಜನ ಶೀಲ ಕಲಾವಂತಿಕೆ ವಿಜ್ಞಾನಕ್ಕೆ ಸರಿಸಮನಾಗಿ ಸಮಾಜವನ್ನು ಸತ್ಯಸೌಂದರ್ಯಗಳತ್ತ ಒಯ್ಯುವ ದಾರಿದೀಪವಾಗಬಲ್ಲದೆಂದು. `1847ರ ರಷ್ಯನ್ ಸಾಹಿತ್ಯದ ಒಂದು ಅವಲೋಕನ ' ಎಂಬ ಲೇಖನದಲ್ಲಿ ಹೀಗೆ ಬರೆದಿದ್ದಾನೆ: 

	``ಮಕ್ಕಳನ್ನು ನಿಷ್ಕರುಣೆಯ ಛಡಿ ಏಟುಗಳಿಂದ ಥಳಿಸುವಂಥ ಅನಾಗರಿಕ ಅನಾದರದಿಂದ ಕೂಡಿದ್ದ ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಡಿಕನ್ಸ್‍ನ ಕಾದಂಬರಿಗಳು ಕಾರಣವಾದುವೆಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ಡಿಕನ್ಸ್‍ನ ಒಬ್ಬ ಕವಿಯ ಪಾತ್ರವಹಿಸಿದನೆಂದರೆ, ಇದರಲ್ಲಿ ತಪ್ಪೇನು ಎಂದು ನಾವು ಕೇಳುತ್ತೇವೆ. ಅದರಿಂದಾಗಿ ಅವನ ಕಾದಂಬರಿಗಳ ಕಲಾಸೌಂದರ್ಯದ ಮೌಲಕ್ಕೇನಾದರೂ ಕುಂದುಂಟಾಯಿತೆ ? ಇದೊಂದು ಸ್ವತಸ್ಸಿದ್ಧನಾದ ತಪ್ಪು ಗ್ರಹಿಕೆ. ಕಲೆ ಮತ್ತು ವಿಜ್ಞಾನಗಳು ಒಂದೇ ಅಲ್ಲ ಎಂದು ಜನ ತಿಳಿಯುತ್ತಾರೆ; ಆದರೆ ಅವುಗಳಲ್ಲಿಯ ವ್ಯತ್ಯಾಸ ವಸ್ತುವನ್ನು ಕುರಿತದ್ದಲ್ಲ. ಅದನ್ನು ನಿರೂಪಿಸುವುದರಲ್ಲಿದೆ ಎಂಬುದು ಅವರಿಗೆ ತಿಳಿಯದು. ತತ್ತ್ವ ಜ್ಞಾನಿ ಯುಕ್ತಿಯುಕ್ತವಾಗಿ ಮಾತನಾಡುತ್ತಾನೆ. ಕವಿ ಪ್ರತಿಮೆಗಳಲ್ಲಿಯೂ ಚಿತ್ರಗಳಲ್ಲಿಯೂ ನುಡಿಯುತ್ತಾನೆ. ಇಬ್ಬರೂ ಹೇಳುವುದು ಒಂದೇ ವಿಷಯವಾಗಿರುತ್ತದೆ. ಅರ್ಥಶಾಸ್ತ್ರ ಅಂಕೆ ಅಂಶಗಳಿಂದ ಸನ್ನದ್ಧವಾಗಿ, ಇಂಥಿಂಥ ಕಾರಣಗಳಿಂದ ಸಮಾಜದ ಇಂಥಿಂಥ ವರ್ಗ ಬಹುವಾಗಿ ಏಳಿಗೆಯಾಗಿವೆ ಅಥವಾ ಬಲುಮಟ್ಟಿಗೆ ಸೊರಗಿದೆ ಎಂಬುದನ್ನು ಓದುಗರ ಮತ್ತು ಶ್ರೋತೃಗಳ ಮನನಾಟುವಂತೆ ನಿವೇದಿಸಿ ಸಿದ್ಧಪಡಿಸುತ್ತಾನೆ. ತನ್ನ ಸತ್ಯದ ಜೀವಂತ ಹಾಗೂ ಉಜ್ಜ್ವಲ ಚಿತ್ರಣದಿಂದ ಸನ್ನದ್ಧನಾದ ಕವಿ ಇಂಥಿಂಥ ಕಾರಣಗಳಿಂದ ಸಮಾಜದ ಇಂಥಿಂಥ ವರ್ಗ ನಿಜಕ್ಕೂ ತುಂಬ ಏಳಿಗೆಯಾಗಿದೆ ಅಥವಾ ಬಲುಮಟ್ಟಿಗೆ ಸೊರಗಿದೆ ಎಂಬುದನ್ನು ಒಂದು ಪ್ರಾಮಾಣಿಕ ಚಿತ್ರಣದಲ್ಲಿ ತನ್ನ ಓದುಗರ ಕಲ್ಪನಾಶಕ್ತಿಗೆ ನಿವೇದಿಸಿ ತೋರಿಸುತ್ತಾನೆ. ಒಬ್ಬ ಸಿದ್ಧಪಡಿಸುತ್ತಾನೆ. ಮತ್ತೊಬ್ಬ ತೋರಿಸಿಕೊಡುತ್ತಾನೆ. ಆದರೆ ಈರ್ವರೂ ಮನದಟ್ಟು ಮಾಡಿಕೊಡುತ್ತಾರೆ. ಒಬ್ಬ ತರ್ಕದಿಂದ ಮತ್ತೊಬ್ಬ ಚಿತ್ರಗಳಿಂದ. ಆದರೆ ಮೊದಲನೆಯವನನ್ನು ಆಲಿಸುವ, ಅರ್ಥಮಾಡಿಕೊಳ್ಳುವ ಜನ ಕಡಿಮೆ. ಎರಡನೆಯವನನ್ನು ಎಲ್ಲರೂ ಆಲಿಸುತ್ತಾರೆ; ತಿಳಿಯುತ್ತಾರೆ. ಸಮಾಜದ ಅತ್ಯುನ್ನತ ಹಾಗೂ ಅತ್ಯಂತ ಪವಿತ್ರ ಆಸಕ್ತಿ ಎಂದರೆ ತನ್ನ ಪ್ರತಿಯೊಬ್ಬ ಸದಸ್ಯನಿಗೂ ಸಮಾನವಾಗಿ ಲಭ್ಯವಾಗುವ ತನ್ನದೇ ಆದ ಯೋಗಕ್ಷೇಮ ಸದಸ್ಯನಿಗೂ ಸಮಾನವಾಗಿ ಲಭ್ಯವಾಗುವ ತನ್ನದೇ ಆದ ಯೋಗಕ್ಷೇಮ. ಈ ಯೋಗಕ್ಷೇಮ ಪಡೆದುಕೊಳ್ಳುವ ಮಾರ್ಗವೆಂದರೆ ಪ್ರಜ್ಞೆ. ವಿಜ್ಞಾನಕ್ಕೇನೂ ಕಡಿಮೆಯಿಲ್ಲದಂತೆ ಕಲೆ ಈ ಪ್ರಜ್ಞೆಗೆ ಉತ್ತೇಜನ ನೀಡಬಲ್ಲದು. ಈ ವಿಷಯದಲ್ಲಿ ಕಲೆ ಮತ್ತು ವಿಜ್ಞಾನಗಳೆರಡೂ ಸರಿಸಮಾನವಾಗಿ ಅವಶ್ಯಕವಾಗಿರುತ್ತವೆ. ವಿಜ್ಞಾನ ಕಲೆಯ ಸ್ಥಾನಪಲ್ಲಟ ಮಾಡುವುದಾಗಲಿ ಕಲೆ ವಿಜ್ಞಾನದ ಸ್ಥಾನಪಲ್ಲಟ ಮಾಡುವುದಾಗಲಿ ಸಾಧ್ಯವಿಲ್ಲ.	ಕಲಾತ್ಮಕ ಅಭಿವ್ಯಕ್ತಿ ಕುರಿತು ಬೆಲೀನ್‍ಸ್ಕಿ ಹೀಗೆ ಬರೆದಿರುತ್ತಾನೆ; 

	``ಕಾವ್ಯ ಹೊಸತಾಗಿ ಬದುಕನ್ನು ಸೃಷ್ಟಿಸುವುದಿಲ್ಲ; ಅದನ್ನು ಪ್ರತ್ಯುತ್ಪಾದನೆ ಮಾಡುತ್ತದೆ. ಪುನರ್ನಿರ್ಮಾಣ ಮಾಡುತ್ತದೆ ಮತ್ತು ಅದರ ವಿವಿಧ ಸಂಗತಿಗಳಿಂದ ಒಂದು ಪೂರ್ಣ ಜೀವಂತ ಅಖಂಡ ಚಿತ್ರವನ್ನು ನಿರ್ಮಿಸಲು ಬೇಕೆನಿಸುವುಗಳನ್ನು ಆಯ್ದುಕೊಂಡು ಬಾಗಗÀನ್ನಡಿಯಲ್ಲೆಂಬಂತೆ ಒಂದು ದೃಷ್ಟಿಕೋನದಿಂದ ಅವನ್ನು ಪ್ರತಿಬಿಂಬಿಸುತ್ತದೆ.

	ಕಲಾತ್ಮಕ ಪ್ರತಿಮೆಗಳಲ್ಲಿ ಪ್ರಸ್ತುತ ಸತ್ಯದ ಪ್ರತಿಫಲವೇ ಸೃಜನಶೀಲಕಲೆ ಅದು ಸತ್ಯದ ಪ್ರತ್ಯುತ್ಪಾದನೆ, ಪ್ರಪಂಚವನ್ನು ಮತ್ತೆ ಮತ್ತೆ ಸೃಷ್ಟಿಸಿದಂತೆ, ವಿಜ್ಞಾನಕ್ಕೆ ಸರಿಸಾಟಿಯಾಗಿ ಸಾಹಿತ್ಯಕಲೆಗಳೂ ಜ್ಞಾನಭಾಗದ ಪ್ರಭಾವಶಾಲಿ ಸಾಧನಗಳಾಗಿರುತ್ತವೆ ಎಂದು ಬೆಲೀನ್‍ಸ್ಕಿ ಪ್ರತಿಪಾದಿಸಿರುತ್ತಾನೆ. 

	ಸತ್ಯದ ಪ್ರತಿಫಲನವೆಂದರೆ ಅದು ಕೇವಲ ನಕಲು ಮಾಡುವುದೆಂದಲ್ಲ. ಸತ್ಯ ಸಂಗತಿಯನ್ನು ನಕಲು ಮಾಡುವಷ್ಟರಲ್ಲೆ ಕಲಾವಿದ ತೃಪ್ತನಾಗತಕ್ಕದಲ್ಲ. ಈ ಸಂಗತಿಗಳನ್ನು ಅರ್ಥವಿಸಿಕೊಂಡು ಬೆಲೆಕಟ್ಟುವ ಹವಣಿಕೆ ಅವನದಾಗಬೇಕು, ಕನ್ನಡಿಯಲ್ಲಿಟ್ಟು ಪ್ರತಿಬಿಂಬಿಸುವಂತೆ ಬದುಕನ್ನು ಉದಾಸೀನತೆಯಿಂದ ಚಿತ್ರಿಸುವುದು ಕಲೆಯೆನಿಸಲಾರದು. ಅದರಲ್ಲಿ ಕಲಾವಿದನ ಜೀವಂತ ಅರ್ಥಪೂರ್ಣ ಚಿಂತನೆಯಿರಬೇಕು. ಜನಜೀವನ ಕಲ್ಯಾಣದ ಆಶಯ ಮಿಡಿಯುತ್ತಿರಬೇಕು. ಬೆಲೀನ್‍ಸ್ಕಿಯ ಮಾತುಗಳಲ್ಲೆ ಹೇಳುವುದಾದರೆ:

	``ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ದುಡಿಯುವ ಹಕ್ಕನ್ನು ಕಲೆಗೆ ನಿರಾಕರಿಸಿದಲ್ಲಿ ಕಲೆಯನ್ನು ಹೀನಯಿಸಿದಂತೆಯೇ ಹೊರತು ಮೇಲೆತ್ತಿದಂತಾಗುವುದಿಲ್ಲ. ಏಕೆಂದರೆ, ಇದರಿಂದಾಗಿ ಅದರ ಅತ್ಯಂತ ಸತ್ತ್ವಪೂರ್ಣ ಅಂತಃಶಕ್ತಿಯನ್ನೇ ಕಿತ್ತುಕೊಂಡತಾಗುತ್ತದೆ. ಪರಿಣಾಮವಾಗಿ ಅದನ್ನು ಭೋಗಲೋಲುಪರ ಕೀಳ್ಮಟ್ಟದ ವಿನೋದದ ವಸ್ತುವಾಗಿಸುವಂಥ, ಸೋಮಾರಿಗಳ ಆಟದ ವಸ್ತುವಾಗಿಸುವಂಥ ಭಾವನೆಗೀಡು ಮಾಡಿದಂತಾಗುತ್ತದೆ.	ವಿಚಾರಪ್ರವೃತ್ತಿಯಿಂದಷ್ಟೇ ಕಲೆ ಸಾಧಿಸುವುದಿಲ್ಲ. ಅದಕ್ಕೆ ಮೂಲಭೂತವಾಗಿ ಪ್ರಕೃತಿದತ್ತವಾದ ಪ್ರತಿಭೆ ಅತ್ಯಗತ್ಯ ಎಂಬುದನ್ನು ಬೆಲೀನ್‍ಸ್ಕಿ ಒತ್ತಿ ಹೇಳಿರುತ್ತಾನೆ. 

	ಬೈಲೋರಷ್ಯಾದ ರೈತರ ದಾರುಣ ಜೀವನವನ್ನು ಚಿತ್ರಿಸುವ ಉದ್ದೇಶದಿಂದ ಕೂಡಿದ್ದ `ಪ್ಯಾನ್‍ಪೊದ್ಯೊತೊಲಿಕ್ ' ಎಂದು ಕಾದಂಬರಿಯನ್ನು ಕುರಿತು ಬೆಲೀನ್‍ಸ್ಕಿ ಹೀಗೆ ಟೀಕಿಸಿರುತ್ತಾನೆ:

	``ಲೇಖಕರು ಕಾವ್ಯ ಸೀಮೆಯನ್ನು ಅತಿಕ್ರಮಿಸದೆ ಟಿಪ್ಪಣಿಗಳು ಮತ್ತು ವಿವರಣೆಗಳ ನೇರ ವರದಿ ನೀಡಿದ್ದಿದ್ದರೆ ಅವರ ಪ್ರಶಂಸನೀಯ ಉದ್ದೇಶ ಇನ್ನೂ ಚೆನ್ನಾಗಿ ಈಡೇರಿರುತ್ತಿತ್ತು.

	ಮುಂದುವರಿಯುತ್ತ ಬೆಲೀನ್‍ಸ್ಕಿಯ ಮಾತುಗಳು ಕಲೆಯ ಸಲುವಾಗಿ ಅವನ ಸೌಂದರ್ಯ ದೃಷ್ಟಿಯನ್ನು ಎತ್ತಿ ತೋರುತ್ತವೆ: 

	``ಪ್ರವೃತ್ತಿ ಎಂಬ ಮಾಂತ್ರಿಕ ಪದದಿಂದ ಬಹುಜನರು ಇಂದು ಸೆಳೆಯಲ್ಪಟ್ಟು ಅದರಲ್ಲೇ ಎಲ್ಲ ಹುದುಗಿದೆಯೆಂದು ನಂಬುತ್ತಾರೆ. ಆದರೆ ಅವರಿದನ್ನು ಅರ್ಥಮಾಡಿಕೊಂಡಿಲ್ಲ. ಮೊದಲನೆಯದಾಗಿ, ಕಲಾಕ್ಷೇತ್ರದಲ್ಲಿ ಸಹಜ ಪ್ರತಿಭೆಯ ಬೆಂಬಲವಿದ್ದ ಹೊರತು ಪ್ರವೃತ್ತಿಗೆ ಒಂದು ಪುಡಿಕಾಸಿನ ಬೆಲೆಯೂ ಬಾರದು. ಎರಡನೆಯದಾಗಿ, ಪ್ರವೃತಿಯನ್ನು ಲೇಖಕನ ಮನಸ್ಸಿನಲ್ಲಿ ಮಾತ್ರವಲ್ಲ, ಅದಕ್ಕಿಂತ ಮುಖ್ಯವಾಗಿ ಅವನ ಹೃದಯದಲ್ಲಿ, ರಕ್ತದಲ್ಲಿ ಕಾಣುವಂತಿರಬೇಕು, ಪ್ರಥಮತಃ ಅದೊಂದು ಅಂತಃಕರಣ ಹುಟ್ಟರಿವಾಗಿರಬೇಕು, ಆ ಬಳಿಕವೇ ಅದು ಬಹುಶಃ ಜಾಗೃತ ಕಲಾಚೇತನವಾಗಬಲ್ಲುದು. ಮತ್ತು ಈ ಪ್ರವೃತ್ತಿ ಕಲೆ ಪುಟಿದಂತೆಯೇ ತಾನೂ ಪುಟಿಯಬೇಕು. ಎಲ್ಲೋ ಓದಿ ಕೇಳಿ ತಿಳಿದ ಭಾವನೆಯಿರಬಹುದು. ಅದನ್ನು ಸರಿಯಾಗಿ ಅರ್ಥವಿಸಿಕೊಂಡಿರಲೂಬಹುದು, ಆದರೆ ಅದು ಅವನ ಪ್ರಕೃತ್ತಿಯಲ್ಲಿ ಸಮೀಕರಣವಾಗದಿದ್ದಲ್ಲಿ ಅವನ ವ್ಯಕ್ತಿತ್ವದ ಮುದ್ರೆ ತಳೆಯದಿದ್ದಲ್ಲಿ, ಅದು ಕವಿತೆಗೆ ಮಾತ್ರವಲ್ಲ ಯಾವುದೇ ಸಾಹಿತ್ಯಸೃಷ್ಟಿಗೂ ಸತ್ತ ಬಂಡವಾಳದಂತೆ. ಪ್ರವೃತ್ತಿಯನ್ನು ನೀವು ಯಾವ ರೀತಿಯಲ್ಲಾದರೂ ನಕಲು ಮಾಡಿರಬಹುದು ನಿಖರವಾದ ಭಾವನೆಗಳಿಂದಲೂ ಸದಾಶಯ ಪ್ರವೃತ್ತಿಗಳಿಂದಲೂ ಸಂಸ್ಕರಿಸಿರಲೂ ಬಹುದು. ಆದರೆ ನಿಮ್ಮಲ್ಲಿ ಕಾವ್ಯಪ್ರತಿಭೆ ಇಲ್ಲದೆ ಹೋದಲ್ಲಿ ನಿಮ್ಮ ನಕಲುಗಳು ತಮ್ಮ ಮೂಲ ಯಾವುದೆಂಬುದನ್ನು ಯಾರಿಗೂ ತಿಳಿಸಲಾರವು. ಅವುಗಳ ಭಾವನೆಗಳೂ ಪ್ರವೃತ್ತಿಗಳೂ ಅಲಂಕಾರಿಕ ಚರ್ವಿತಚರ್ವಣವಾಗುತ್ತವಷ್ಟೆ. (ಬೆಲೀನ್‍ಸ್ಕಿಯ ಲೇಖನಗಳಲ್ಲಿ ಪ್ರಕೃತಿ ಎಂಬ ಮಾತು ಪ್ರಾಕೃತಿಕ ನಿಯಮಗಳಿಗೆ ಅನುಸಾರ ಪ್ರಚಲಿತವಿರುವ ವಾಸ್ತವತೆಯನ್ನು ಕುರಿತ ನಿರ್ದೇಶನವೇ ಆಗಿರುತ್ತದೆ.)

	ಹೀಗೆ ಕಲೆಗೆ ತನ್ನದೇ ಆದ ಆಂತರಿಕ ಸ್ವರೂಪ ಲಕ್ಷಣವಿದೆ ಎನ್ನುವ ಬೆಲೀನ್‍ಸ್ಕಿ ಅದು ಬದುಕಿಗೆ ಸಂಬಂಧಿಸಿದ ಶುದ್ದಕಲೆ ಎಂದೂ ಆಗಲಾರದೆಂದು ಸ್ಪಷ್ಟವಾಗಿ ಹೇಳುತ್ತಾನೆ: 

	``ಬದುಕಿನ ಬೇರೆ ಬೇರೆ ಮುಖಗಳೊಂದಿಗೆ ಯಾವ ಸಂಬಂಧವೂ ಇಲ್ಲದೆ ತಾನೇ ತಾನಾಗಿರುವ ಶುದ್ಧ ಅಮೂರ್ತಕಲೆಯ ಭಾವನೆ ಕನಸಿನ ಭ್ರಾಂತಿಯಷ್ಟೆ. ಅಂಥ ಕಲೆ ಎಂದೂ ಎಲ್ಲಿಯೂ ಇರಲಿಲ್ಲ.	ಮಾನವೇತಿಹಾಸದಲ್ಲಿ ನಿರಂತರವಾಗಿ ಪ್ರವಹಿಸುತ್ತ ಸತ್ಯಸೌಂದರ್ಯಗಳ ಹೊಸ ಹೊಸ ನೆಲೆಗಳನ್ನು ನಿರ್ಮಿಸಿಕೊಂಡು ಮುಂದುವರಿಯುತ್ತಿರುವ ಆದಮ್ಯ ಮಾನವಚೇತನವೇ ಬೆಲೀನ್‍ಸ್ಕಿಯ ಸೌಂದರ್ಯಮೀಮಾಂಸೆಯ ಜೀವನಾಡಿ ಎನ್ನಬಹುದು. ಎಂತಲೇ ಅವರು ಉದಾತ್ತ ಸೌಂದರ್ಯೋಪಾಸಕನೇ ಆಗಿದ್ದ. ಪ್ರಕೃತಿದತ್ತವಾದ ಪ್ರತಿಭೆ ಮೊದಲ ಅಗತ್ಯ, ಅದಿಲ್ಲದೆ ಲೇಖಕ ಕಲಾವಿದನೆನಿಸಲಾರ. ಆದರೆ ಆ ಪ್ರತಿಭೆಯೊಂದೇ ಸಾಲದು. ಅದರೊಂದಿಗೆ ಅವನಲ್ಲಿ ಪ್ರಾಮಾಣಿಕ ಮಾನವತಾ-ಆಶಯವಿರಬೇಕು. ವಸ್ತುನಿಷ್ಠೆಯಿರಬೇಕು. ಅಂಥ ಪ್ರಾಮಾಣಿಕ ಕಲಾಚೇತನ ವಸ್ತುಸ್ಥಿತಿಯಲ್ಲಿ ತಾದಾತ್ಮ್ಯಗೊಂಡಾಗ ಅದಮ್ಯ ಮಾನವಚೇತನದ ದರ್ಶನವೇ ಪ್ರತಿಮೆಗಳಲ್ಲಿ ಧ್ವನಿಸುತ್ತದೆ. ಸೌಂದರ್ಯಕ್ಕೆ ಅಪವಾದವೇ ಆದ ಅಸತ್ಯಮಿಥ್ಯಗಳ ವಿರುದ್ಧ ವಸ್ತುಸ್ಥಿತಿಯ ಒಳಪದರಗಳಲ್ಲಿ ಸತತವಾಗಿ ಮಿಡಿಯುತ್ತಿರುವ ಸನಾತನ ಮಾನವಚೇತನವೇ ಎದ್ದು ಕಾಣುತ್ತದೆ. ಅದರ ಅಭಿವ್ಯಕ್ತಿ ಸಂಕಟದ ಸಂಕೋಲೆಯಲ್ಲಿ, ಪ್ರತಿಭಟನೆಯ ಕೆಚ್ಚಿನಲ್ಲಿ, ಸ್ವಾರ್ಥ ಕ್ರೌಯಗಳ ಆತ್ಮವಂಚನೆಯ ವಿಕಾರಗಳ ವಿಪರ್ಯಾಸದಲ್ಲಿ, ಇದರ ವಿರುದ್ಧ ಹೋರಾಟದ ಕ್ಷಾತ್ರದಲ್ಲಿ, ತ್ಯಾಗ ಬಲಿದಾನಗಳ ಪೂರ್ಣಾಹುತಿಯಲ್ಲಿ ಹೀಗೆ ಬಗೆಬಗೆಯಾಗಿ ಮಿಡಿಯಬಹುದು. ಸೃಜನಶೀಲ ಕಲಾವಿದನ ಸ್ವಂತ ಅಭಿಪ್ರಾಯಗಳೇನೇ ಇರಲಿ, ಅವನ ಕಲಾಚೇತನ ಮಾನವತಾ-ಆಶಯದಿಂದ ಪ್ರಾಮಾಣಿಕವಾಗಿ ವಸ್ತುನಿಷ್ಟವಾದಾಗ, ಅವನು ಕಲೆಯಬಾಗುಗನ್ನಡಿಯಲ್ಲಿ ಮಾನವತಾ ಗತಿಶೀಲತೆಯ ಜೀವಂತ ಚಿತ್ರವನ್ನೇ ಪ್ರತಿಮೆಗಳಲ್ಲಿ ಪ್ರತಿಫಲಿಸುತ್ತಾನೆ. ಅವನು ಪ್ರಚಾರಕನಲ್ಲ, ಉಪದೇಶಕನೂ ಅಲ್ಲ-ದ್ರಷ್ಟಾರ. ಸತ್ಯ ಸೌಂದರ್ಯಗಳ ಅನನ್ಯ ಅವಿನಾಭಾವ ಅವನದು. ಸತ್ಯವಲ್ಲದು ಎಂದೂ ಸುಂದರವಾಗದು, ಅಂಥ ಅಸತ್ಯಮಿಥ್ಯಗಳ ವಿರುದ್ಧ ವಸ್ತುಸ್ಥಿತಿಯ ಒಳಪದರಗಳಲ್ಲಿ ಪ್ರಾಮಾಣಿಕವಾಗಿ ಮಿಡಿಯುತ್ತಿರುವ ಮಾನವ ಚೇನವೇ ಸೌಂದರ್ಯದ ನೆಲೆ ಹಾಗೂ ಸತ್ಯದ ಸೋಪಾನ ಎನ್ನುವ ಸೌಂದರ್ಯ ಮೀಮಾಂಸೆ ಬೆಲೀನ್‍ಸ್ಕಿಯುದು.

	ಬೆಲೀನ್‍ಸ್ಕಿಯ ಸೌಂದರ್ಯಮೀಮಾಂಸೆ ಬೆಳೆದಿದ್ದು ಅವನ ಸಾಹಿತ್ಯಕ ಲೇಖನಗಳಲ್ಲಿ; ಸಾಹಿತ್ಯಚಿಂತನಗಳು, ಪೂಷ್ಕಿನ್ ಕೃತಿಗಳನ್ನು ಕುರಿತ ಲೇಖನಮಾಲೆ, ರಷ್ಯನ್‍ಕಾದಂಬರಿ ಮತ್ತು ಗೋಗೊಲ್‍ನ ಕೃತಿಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು. ರಷ್ಯನ್ ಸಾಹಿತ್ಯಕುರಿತ ಆಲೋಚನೆಗಳು ಮತ್ತು ಟಿಪ್ಪಣಿಗಳು, 1846 ಮತ್ತು 1847ರ ರಷ್ಯನ್ ಸಾಹಿತ್ಯದ ಅವಲೋಕನ, ವಿ.ಪಿ.ಬೊತೀನ್‍ಗೆ ಬರೆದ ಪತ್ರಗಳು, ಪುಸ್ತಕವಿಮರ್ಶೆಗಳು ಮತ್ತು ಕೊನೆಯದಾಗಿ ಗೋಗೊಲ್‍ಗೆ ಬರೆದಪತ್ರ. ಈ ಎಲ್ಲ ಲೇಖನಗಳಲ್ಲಿ ಬೆಲೀನ್‍ಸ್ಕಿ ವಾಸ್ತವತೆಯ ಸಮಗ್ರ ಪರಿಕಲ್ಪನೆಯನ್ನು ಹಂತಹಂತವಾಗಿ ಪ್ರತಿಪಾದಿಸಿರುತ್ತಾನೆ.

	ಬೆಲೀನ್‍ಸ್ಕಿಯ ಸಾಹಿತ್ಯ ವಿಮರ್ಶೆ ಲೊಮೊನೊಸೋವ್‍ನಿಂದ (1711-65) ಮೊದಲುಗೊಂಡು ತುರ್ಗೇನೆವ್ (1818-83) ಮತ್ತು ಕಸ್ತಯೇವ್‍ಸ್ಕಿ (1821-81) ಅವರ ಆರಂಭದ ಕೃತಿಗಳವರೆವಿಗೆ ವ್ಯಾಪಕವಾಗಿದ್ದು ಸಮಗ್ರ ರಷ್ಯನ್ ಸಾಹಿತ್ಯದ ಮೌಲ್ಯಮಾಪನವೇ ಅದರಲ್ಲಡಗಿದೆ. ಇದರಿಂದಾಗಿ ಪೂಷ್ಕಿನ್ (1799-1837). ಗೋಗೊಲ್ (1809-52). ಲೆರ್ಮಂತೊವ್ (1814-41) ಮುಂತಾದವರ ಕೃತಿಗಳು ವಿಶ್ವ ಸಾಹಿತ್ಯದಲ್ಲಿ ತಮ್ಮ ನೈಜಸ್ಥಾನ ಪಡೆದುಕೊಳ್ಳುವಂತಾಯಿತು. ತತ್ತ್ವಬದ್ಧವಾದ ಬೆಲೀನ್‍ಸ್ಕಿ ಸೌಂದರ್ಯಮೀಮಾಂಸೆ ಸಮಗ್ರಮಾನವಕುಲಕ್ಕೆ ದೊರೆಯುವಂತಾದದ್ದು ಈ ವಿಮರ್ಶೆಗಳಲ್ಲೇ.

	1840ರ ತರುವಾಯದ ಲೇಖನಗಳಲ್ಲಿ ಬೆಲೇನ್‍ಸ್ಕಿಯ ಪರಿಪಕ್ವವಾದ ಉತ್ಕøಷ್ಟ ಚಿಂತನೆಯನ್ನು ಕಾಣಬಹುದಾಗಿದೆ. ಸಮಗ್ರ ವಿಶ್ವಸಾಹಿತ್ಯದ ಹಿನ್ನೆಲೆಯಲ್ಲಿ ಮಾನವತೆಯ ಸಂಕೀರ್ಣ ಮೌಲ್ಯಪ್ರಜ್ಞೆಯಿಂದ ಸಂಸ್ಕಾರ ಪಡೆದು ರಷ್ಯನ್ ಸಾಹಿತ್ಯದ ಇತಿಹಾಸವೇ ಈ ಲೇಖನಮಾಲೆಯಲ್ಲಿ ಮೂಡಿಬರುತ್ತದೆ. ಮಾನವೇತಿಹಾಸ, ಮಾನವಶಾಸ್ತ್ರ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ ಈ ಎಲ್ಲ ಆಕರಗಳಿಂದ ಪಡೆದ ಮೌಲ್ಯಪ್ರಜ್ಞೆ ಈ ಲೇಖನಗಳುದ್ದಕ್ಕೂ ಮಿಂಚುತ್ತದೆ. 

	ಹೋಮರ್, ವರ್ಜಿಲ್, ಅರಿಸ್ತೋಫೇನ್ಸ್, ಹೊರೇಸ್, ಸೊಫೋಕ್ಲಿಸ್ ಮುಂತಾದ ಪ್ರಾಚೀನರಿಂದ ಮೊದಲ್ಗೊಂಡು ಷೇಕ್‍ಸ್ಪಿಯರ್, ಮಿಲ್ಟನ್, ಗಯಟೆ, ಹೀನ್, ವಾಲ್ಟರ್ ಸ್ಕಾಟ್, ರಾಬರ್ಟ್‍ಸದೆ, ವಡ್ರ್ಸ್‍ವರ್ತ್, ಬಾಲ್ಜಾಕ್, ಸಾಂದ್ ಮುಂತಾದ ಎಲ್ಲ ಪ್ರಾಚೀನ ಅರ್ವಾಚೀನ, ಸಮಕಾಲೀನ ಪಾಶ್ಚಾತ್ಯ ಲೇಖಕರನ್ನೂ ಅವರ ಕೃತಿಗಳನ್ನೂ ಬೆಲೀನ್‍ಸ್ಕಿ ಸಂದರ್ಭೋಚಿತವಾಗಿ ಉಲ್ಲೇಖಿಸಿರುವುದನ್ನು ಗಮನಿಸಿದಾಗ ಅವನ ಅಧ್ಯಯನಸಾಂದ್ರತೆ ಮತ್ತು ಮೌಲ್ಯಪ್ರಜ್ಞೆ ನಿಜಕ್ಕೂ ದಂಗುಬಡಿಸುವಂತಿವೆ. 

	ಹಾಗೆಯೇ ಬೇಲಿನ್‍ಸ್ಕಿಯ ಪ್ರಾಮಾಣಿಕ ಪರಾಮರ್ಶೆಗೆ ಒಳಗಾಗದ ಯಾವ ಪಾಶ್ಚಾತ್ಯ ತತ್ವವೇತ್ತರನ್ನೂ ಸೌಂದರ್ಯಮೀಮಾಂಸಕರನ್ನೂ ಚಿಂತಕರನ್ನೂ ಕಾಣಲಸದಳ, ಪ್ಲೇಟೋ, ಅರಿಸ್ಟಾಟಲ್, ಮಾರ್ಟಿನ್‍ಲೂಥರ್, ಹಟ್ಟೆನ್, ಜಾನ್‍ಲಾಕ್, ವಾಲ್ಟೇರ್, ಕಾಂಟ್, ಹೆಗೆಲ್, ಫಿಕ್ಟೆ, ಫೂಯರ್‍ಬಾಕ್, ಲೂಯಿಬ್ಲಾಕ್ ಮುಂತಾದವರು ಚಿಂತನೆಗಳು ಬೆಲೀನ್‍ಸ್ಕಿಯ ಲೇಖನಗಳುದ್ದಕ್ಕೂ ಹರಿದುಬಂದು ಮಾನವತಾ ಸಂಸ್ಕರಣ ಪಡೆಯುತ್ತವೆ. ಈ ಲೇಖನಗಳನ್ನು ಓದುವಾಗಿ ಮಾನವೇತಿಹಾಸವೇ ಎಚ್ಚೆತ್ತು ಬೆಲೀನ್‍ಸ್ಕಿಯೊಂದಿಗೆ ದನಿಗೂಡಿಸುತ್ತಿರುವ ಅನುಭವವಾಗುತ್ತದೆ. ಮಾನವೇತಿಹಾಸದ ಉದ್ದಕ್ಕೂ ಸತ್ಯಸೌಂದರ್ಯಗಳ ಅನ್ವೇಷಣದಲ್ಲಿ ಮಿಂಚುವ ಸನಾತನ ಮಾನವ ಚೇತನದ ಸಾಕ್ಷಿ ಪ್ರಜ್ಞೆಯಾಗಿ ಈ ಚಿಂತನೆಗಳು ಬೆಲೀನ್‍ಸ್ಕಿ ವಿವೇಚಿಸುತ್ತಾನೆ.

	ರಷ್ಯನ್ ಸಾಹಿತ್ಯದಲ್ಲಿ ಪೂಷ್ಕಿನ್‍ಯುಗ, ಗೋಗೊಲ್ ಯುಗಗಳನ್ನು ಬೆಲೀನ್‍ಸ್ಕಿ ಎತ್ತಿತೋರಿಸಿರುತ್ತಾನೆ. ಕುಲೀನ ಹಾಗೂ ಮಧ್ಯಮವರ್ಗಗಳ ಜೀವನವನ್ನು ಅತ್ಯಂತ ಕಲಾತ್ಮಕವಾಗಿ ಪ್ರತಿಫಲಿಸುವ ಪೂಷ್ಕಿನ್ನನ ಕಾವ್ಯ `ಇವ್ಗೇನಿ ಅನೇಗಿನ್ ' `` ರಷ್ಯನ್ ಸಮಾಜದ ವಿಶ್ವಕೋಶ, ರಾಷ್ಟ್ರೀಯ ಕೃತಿ ಎಂದು ಬೆಲೀನ್‍ಸ್ಕಿ ಹೇಳಿರುತ್ತಾನೆ. ಪೂಷ್ಕಿನ್ನನ ಕಲಾಪರಿಪೂರ್ಣತೆ ರಷ್ಯನ್ ಸಾಹಿತ್ಯದ ಮೊದಲ ಘಟ್ಟವಾದರೆ, ಅಲ್ಲಿಂದ ಮುಂದೆ ಕ್ರಾಂತಿಕಾರಿ ಪ್ರಜಾತಂತ್ರದ ಐತಿಹಾಸಿಕ ಹೋರಾಟದ ಸಂಧಿಕಾಲವನ್ನು ಜನಜೀವನದಲ್ಲಿ ಜೀವಂತವಾಗಿ ಪ್ರತಿಫಲಿಸಿದ ವಾಸ್ತವತೆಯ ಹೊಸ ಪರಿಚ್ಛೇದವನ್ನೇ ಗೋಗೊಲ್ ಆರಂಭಿಸಿದುದನ್ನು ರಷ್ಯನ್ ಸಾಹಿತ್ಯದ ಎರಡನೆಯ ಘಟ್ಟವಾಗಿ ಬೆಲೀನ್‍ಸ್ಕಿ ಗುರುತಿಸಿರುತ್ತಾನೆ.    

	ಮೊದಲ ನಿಕೊಲಾಸ್‍ನ ನಿರಂಕುಶ ಆಡಳಿತದ ಅಂದಿನ ರಷ್ಯಾದಲ್ಲಿ ನೇರವಾದ ಪ್ರಗತಿಶೀಲ ತಾತ್ತ್ವಿಕ ಚಿಂತನೆಗೆ ಯಾವುದೇ ಅವಕಾಶವೂ ಇರಲಿಲ್ಲ. ಇದರಿಂದಾಗಿ ಬೆಲೀನ್‍ಸ್ಕಿ ತನ್ನೆಲ್ಲ ಚಿಂತನೆಯನ್ನು ಸಾಹಿತ್ಯವಿವರ್iಶೆ ಹಾಗೂ ಸಾಹಿತ್ಯಕ ಚಿಂತನೆಗಳ ಮಾಧ್ಯದಲ್ಲಿ ಬೆಳಸಬೇಕಾಯಿತು. ತತ್ತ್ವಬದ್ಧವಾದ ಅವನ ಸೌಂದರ್ಯಮೀಮಾಂಸೆ ರೂಪುಗೊಳ್ಳಲು ಇದೊಂದು ರೀತಿ ಅನುಕೂಲಕರವೇ ಆಯಿತೆನ್ನಬಹುದು. 

	ಬೆಲೀನ್‍ಸ್ಕಿ ನೇರವಾಗಿ ಯಾವುದೇ ರಾಜಕೀಯ ಚಳವಳಿಯಲ್ಲಿ ಪಾತ್ರವಹಿಸಲಿಲ್ಲವಾದರೂ ರಷ್ಯಾದಲ್ಲಿ ಆದೇತಾನೆ ಆರಂಭದ ದೆಸೆಯಲ್ಲಿದ್ದ ಕ್ರಾಂತಿಕಾರಿ ಪ್ರಜಾತಂತ್ರ ಚಳವಳಿಗೆ ಅವನ ಸಾಹಿತ್ಯಕ ಲೇಖನಗಳಲ್ಲಿ ಎದ್ದು ಕಾಣುತ್ತಿದ್ದ ತಾತ್ತ್ವಿಕ ಪ್ರೇರಣೆ eóÁರ್ ಪ್ರಭುತ್ವದ ಗಮನಕ್ಕೆ ಬಾರದೆ ಹೋಗಲಿಲ್ಲ. ಗುಪ್ತ ಪೊಲೀಸ್ ದಳದ ಬುಲ್ಗಾರಿನ್ ಮತ್ತು eóÁರ್ ಪ್ರಭುತ್ವಕ್ಕೆ ನಿಷ್ಠರಾದ ಅನೇಕ ಪ್ರತಿಗಾಮಿ ಲೇಖಕರು ಬೆಲೀನ್‍ಸ್ಕಿ ಬಂಡಾಯ ಲೇಖಕನೆಂದು ಸರ್ಕಾರಕ್ಕೆ ವರದಿ ಕಳಿಸುತ್ತಿದ್ದರು. ಹಾಡಹಗಲಲ್ಲಿ ಸಂಚು ಮಾಡಲಾರದೆ ಪತ್ರಿಕೆಗಳ ಅಂಕಣಗಳ ಮರೆಯಲ್ಲಿ ಅವನು ರಾಜದ್ರೋಹ ಎಸಗುತ್ತಿದ್ದಾನೆಂದು ತಿಳಿಸುತ್ತಿದ್ದರು. ಪ್ಯೊದೊರೊವ್ ಎಂಬ ಸಾಮ್ರಾಜ್ಯವಿಜ್ಞಾನ ವಿದ್ಯಾಪೀಠದ ಸದಸ್ಯನೊಬ್ಬ ಬೆಲೀನ್‍ಸ್ಕಿಯ ಪತ್ರಿಕಾಲೇಖನಗಳನ್ನೆಲ್ಲ ಸಂಗ್ರಹಿಸಿ, ಅವುಗಳಿಂದ ಅನೇಕ ಭಾಗಗಳನ್ನು ಕತ್ತರಿಸಿ, ಅವನ್ನು ವಿಂಗಡಿಸಿ ಏಳು ಬುಟ್ಟಿಗಳಿಗೆ ಹಾಕಿ ` ದೇವರ ವಿರುದ್ಧ ' , ` ಸರ್ಕಾರದ ವಿರುದ್ಧ ', ನೀತಿಯ ವಿರುದ್ಧ ' ಮುಂತಾದ ತಲೆಚೀಟಿಗಳನ್ನು ಅವಕ್ಕೆ ಲಗತ್ತಿಸಿ ಗುಪ್ತ ಪೊಲೀಸ್ ದಳಕ್ಕೆ ಅವನ್ನು ರವಾನಿಸಿದ. ಒಮ್ಮೆ eóÁರನ ಮುತ್ಸದ್ದಿಯೊಬ್ಬನ ಭೇಟಿಯಾದಾಗ `` ಸೇಂಟ್ ಪೀಟರ್ ಮತ್ತು ಪಾಲ್ ದುರ್ಗದ ಕಾರಾಗೃಹದಲ್ಲಿ ನಿನಗಾಗಿ ಬೆಚ್ಚನೆಯ ಕೋಣೆಯೊಂದು ಸಿದ್ಧವಾಗಿದೆ  ಎಂದವನು ಬೆಲೀನ್‍ಸ್ಕಿಗೆ ಹೇಳಿದ. 

	ಬಾಳಿನುದ್ದಕ್ಕೂ ಬಡತನ, ಉಪವಾಸ, ಪ್ರಭುತ್ವದಿಂದ ಪರಿಪರಿಯ ಹಿಂಸೆ ಕಿರುಕುಳಗಳಿಂದಾಗಿ ಬೆಲೀನ್‍ಸ್ಕಿಯ ಆರೋಗ್ಯ ಒಂದೇ ಸಮನೆ ಕೆಡುತ್ತ ಬಂತು. 1847ರಲ್ಲಿ ಕ್ಷಯರೋಗಪೀಡಿತನಾಗಿ ಬೆಲೀನ್‍ಸ್ಕಿ ಫ್ರಾನ್ಸ್ ಮತ್ತು ಜರ್ಮನಿ ದೇಶಗಳಿಗೆ ಚಿಕಿತ್ಸೆಗಾಗಿ ತೆರಳಿದ. ಹೀಗೆ ವಿದೇಶದಲ್ಲಿದ್ದಾಗ 1847 ಜುಲೈ 3 ರಂದು ಸಾಲ್ಸ್‍ಬ್ರನ್‍ನಲ್ಲಿ ತನ್ನ ಕಟ್ಟಕಡೆಯ ಲೇಖನ ` ಗೋಗೊಲ್‍ಗೆ ಪತ್ರ ' ಬರೆ, ಚರಿತ್ರಾರ್ಹವಾದ ಈ ಪತ್ರವನ್ನು ಬೆಲೀನ್‍ಸ್ಕಿ ಮರಣಶಾಸನವೆಂದು ಎ.ಐ.ಹರ್ಜನ್ ಕರೆದಿರುವುದು ಅರ್ಥಪೂರ್ಣವಾಗಿದೆ. ಈ ಪತ್ರ ಒಂದು ಇತಿಹಾಸವನ್ನೇ ನಿರ್ಮಿಸಿತೆನ್ನಬಹುದು. 

	ಗೋಗೊಲ್‍ನ ಕಲಾಚೇತನ ಸಮಕಾಲೀನ ವಾಸ್ತವತೆಯನ್ನು ಪ್ರಾಮಾಣಿಕವಾಗಿ ಕಲೆಯ ಕನ್ನಡಿಯಲ್ಲಿ ಪ್ರತಿಫಲಿಸಿ, ರಷ್ಯನ್ ಸಾಹಿತ್ಯದಲ್ಲಿ ವಾಸ್ತವತೆಯ ಹೊಸಯುಗವನ್ನೇ ಆರಂಭಿಸಿದ್ದನ್ನು ಬೆಲೀನ್‍ಸ್ಕಿ ಎತ್ತಿತೋರಿಸಿದ್ದ. ಗೋಗೊಲ್‍ನ `ಡೆಡ್‍ಸೌಲ್ಸ್ ಮತ್ತು `ಇನ್‍ಸ್ಪೆಕ್ಟರ್ ಜನರಲ್ ಕೃತಿಗಳಲ್ಲಿ ಸರ್ವಕಾಲೀನ ವಾಸ್ತವತೆಯ ಕಲಾತ್ಮಕ ಜೀವಂತ ಉಸಿರನ್ನೇ ಬೆಲೀನ್‍ಸ್ಕಿ ಕಂಡುಕೊಂಡಿದ್ದ. ಆದರೆ ಗೋಗೊಲ್ ವೈಯಕ್ತಿಕವಾಗಿ ತಳೆದಿದ್ದ ಮನೋ ಧರ್ಮವೇ ಬೇರೆ. ಬಲು ಮಟ್ಟಿಗೆ ಆದರ್ಶವಾದದ ಪ್ರತಿಗಾಮಿ ಪ್ರಭಾವಕ್ಕೊಳಗಾಗಿದ್ದ ಅವನು ನೀತಿ ಧರ್ಮಗಳ ಉಪದೇಶಕನ ಸ್ಥಾನದಲ್ಲಿ ನಿಂತು, ಜನತೆಯನ್ನು ಹೀನಯಿಸಿ, ಪರಿಣಾಮದಲ್ಲಿ ಪ್ರಭುತ್ವವನ್ನು ಓಲೈಸುವಂಥ ವಿಚಾರಗಳನ್ನು `ಒಡಿಸ್ಸಿ ಎಂಬ ಪ್ರಬಂಧದಲ್ಲಿ ಬರೆದು ಪ್ರಚುರಪಡಿಸಿದ. ಇದನ್ನು ಅವಲೋಕಿಸಿದ ಬೆಲೀನ್‍ಸ್ಕಿ ಸಟೆದು ತನ್ನ ವಿರೋಧ ವ್ಯಕ್ತಪಡಿಸಿದ. ಆ ಬಳಿಕ ಗೋಗೂಲ್ ತನ್ನ ` ಡೆಡ್‍ಸೌಲ್ಸ್ ' ಕೃತಿಯ ಧ್ವನಿಯನ್ನು ಕುಗ್ಗಿಸುವಂಥ ಮುನ್ನುಡಿಯೊಂದಿಗೆ ಅದರ ದ್ವಿತೀಯ ಸಂಸ್ಕರಣವನ್ನು ಪ್ರಕಟಿಸಿದ. ಬೆಲೀನ್‍ಸ್ಕಿ ಇದನ್ನು ಘೋರ ಅಪರಾದವೆಂದೆಣಿಸಿ ಕಟುವಾಗಿ ಟೀಕಿಸಿದ. ಗೋಗೊಲ್ ಇದಕ್ಕೆ ಪ್ರತಿಯಾಗಿ ಬರೆದ ಪತ್ರ ಸಾಲ್ಸ್‍ಬ್ರನ್‍ನಲ್ಲಿದ್ದ ಬೆಲೀನ್‍ಸ್ಕಿಗೆ ತಲುಪಿತು. ಈ ಪತ್ರ ಸೇರುತ್ತಲೆ ಬೆಲೀನ್‍ಸ್ಕಿ ಸಿಡಿದೆದ್ದು ಬರೆದದ್ದೆ `ಗೋಗೊಲ್‍ಗೆ ಪತ್ರ. eóÁರ್‍ಶಾಹಿ ಹಾಗೂ ಜೀತಪದ್ಧತಿಗಳ ವಿರುದ್ಧ ಹತ್ತೊಂಬತ್ತೆನಯ ಶತಮಾನದ ಅಗ್ನಿಜ್ವಾಲೆಯನ್ನೇ ಈ ಪತ್ರದಲ್ಲಿ ಕಾಣಬಹುದಾಗಿದೆ:

	``ನೀನು ಚಿಂತಕನಲ್ಲ ಎಂದಲ್ಲ, ಆದರೆ ಅನೇಕ ವರ್ಷಗಳಿಂದ `ನಿನ್ನ ಸುಂದರ ಸುದೂರ ದಿಂದ ರಷ್ಯಾವನ್ನು ನೋಡುವ ಅಭ್ಯಾಸವಾಗಿ ಬಿಟ್ಟಿದೆ ನಿನಗೆ. ನಮಗೆ ಹೇಗೆ ಬೇಕೋ ಹಾಗೆ ನೋಡುವಂತಾಗಲು ದೂರದಿಂದ ನೋಡುವುದಕ್ಕಿಂತ ಸುಲಭಮಾರ್ಗ ಮತ್ತೊಂದಿಲ್ಲ ಎಂದು ಯಾರಿಗೆ ತಾನೆ ತಿಳಿಯದು; ಏಕೆಂದರೆ, ಆ ಸುಂದರ ಸುದೂರದಲ್ಲಿ ಸಂಪೂರ್ಣವಾಗಿ ಪರಕೀಯಗೊಂಡ ಬದುಕು ನಿನ್ನದಾಗುತ್ತದೆ. ನೀನು ನಿನ್ನಲ್ಲೆ, ನನ್ನೊಳಗೆ ಇರುತ್ತಿ, ಅಥವಾ ನಿನ್ನ ಪ್ರಭಾವವನ್ನು ಪ್ರತಿರೋಧಿಸಲಾಗದ ನಿನ್ನ ಮನೋವೃತ್ತಿಯ ಕೂಟದಲ್ಲೇ ನೀನಿರುತ್ತಿ. ಆದ್ದರಿಂದಲೇ ರಷ್ಯಾ ತನ್ನ ವಿಮೋಚನೆಯನ್ನು ಕಾಣುವುದು ನಾಗರಿಕತೆ, ಜ್ಞಾನೋದಯ ಮತ್ತು ಮಾನವತಾ ಹಿತಾಸಕ್ತಿಗಳಲ್ಲೇ ವಿನಾ ಅಧ್ಯಾತ್ಮ ದೈವಭಕ್ತಿ ವಿರಕ್ತಿಗಳಲ್ಲಲ್ಲ ಎಂಬುದು ನಿನಗೆ ತಿಳಿಯದೆ ಹೋಯಿತು. ರಷ್ಯಾದ ಜನತೆಗೆ ಬೇಕಿರುವುದು ಧರ್ಮೋಪದೇಶಗಳಲ್ಲ (ಅವನ್ನು ಅದು ಸಾಕಷ್ಟು ಕೇಳಿಯಾಗಿದೆ.), ಅಥವಾ ಪ್ರಾರ್ಥನೆಗಳೂ ಅಲ್ಲ (ಅವನ್ನು ಅದು ಅನೇಕಬಾರಿ ಮೇಲಿಂದ ಮೇಲೆ ಉಚ್ಚರಿಸಿದ್ದಾಗಿದೆ !) ಶತಮಾನಗಟ್ಟಲೆ (ದೌರ್ಜನ್ಯ ಅನ್ಯಾಯಗಳಿಂದಾಗಿ) ಕಸಕೊಳಚೆಗಳಲ್ಲಿ ಬಿದ್ದು ಕೊಂಡಿರುವ ಮಾನವತಾ ಘನತೆಯನ್ನು ಜನತೆಯಲ್ಲಿ ಎಚ್ಚರಿಸುವುದೇ ಈಗ ಬೇಕಿರುವುದು. ಸಾಮಾನ್ಯ ವಿವೇಕ ಮತ್ತು ನ್ಯಾಯಸಮ್ಮತವಾದ ಹಕ್ಕುಗಳು ಮತ್ತು ಕಾನೂನುಗಳು, ಅವುಗಳ ಕಟ್ಟುನಿಟ್ಟಾದ ಪರಿಪಾಲನೆ ಬೇಕೇ ಹೊರತು ಚರ್ಚಿನ ಉಪದೇಶಕ್ಕನುಸಾರವಾಗಿ ಅಲ್ಲ. ಇದಕ್ಕೆ ಬದಲಾಗಿ ಮನುಷ್ಯರು ಮನುಷ್ಯರನ್ನೇ ಹುರಿದು ಮುಕ್ಕುವ ಘೋರದೃಶ್ಯವೇ ಇಲ್ಲಿ ಕಾಣುತ್ತಿದೆ. ಅಮೆರಿಕದ ಪ್ಲಾಂಟೇಶನ್ ಮಾಲಿಕರು ನೀಗ್ರೋ ಮನುಷ್ಯನೇ ಅಲ್ಲ ಎಂಬ ವ್ಯಾಜ್ಯವನ್ನಾದರೂ ಹೂಡುತ್ತಾರೆ. ಆದರೆ ಇಲ್ಲಿ ಅಂಥ ಸೋಗೂ ಅಗತ್ಯವಿಲ್ಲ. ಜನ ನಿಜವಾದ ಹೆಸರುಗಳಿಂದ ತಮ್ಮನ್ನು ಕರೆದುಕೊಳ್ಳದೆ ಪಾಂಕಾ, ವಾಸ್ಕಾ, ಸ್ತೇಶ್ಕಾ, ಪಲಾಶ್ಕಾ ಮುಂತಾದ ಅಡ್ಡ ಹೆಸರುಗಳಿಂದ ಕರೆದುಕೊಳ್ಳುತ್ತಾರೆ. ವ್ಯಕ್ತಿಯ ಘನತೆ ಆಸ್ತಿಗಳಿಗೆ ಈ ದೇಶದಲ್ಲಿ ಯಾವ ರಕ್ಷಣೆ ಇಲ್ಲದಿರುವುದಷ್ಟೇ ಅಲ್ಲ ಪೊಲೀಸ್ ವ್ಯವಸ್ಥೆಯೂ ಇಲ್ಲ; ಇಲ್ಲಿರುವುದೆಲ್ಲ ಬಗೆ ಬಗೆಯ ಅಧಿಕೃತ ಕಳ್ಳಕಾಕರ ದೊಡ್ಡ ದೊಡ್ಡ ಸಂಸ್ಥೆಗಳೇ ಆಗಿಬಿಟ್ಟಿವೆ. ರಷ್ಯಾದ ಇಂದಿನ ಅತಿಮುಖ್ಯ ಸಮಸ್ಯೆಗಳೆಂದರೆ ಜೀತಪದ್ಧತಿ ಮತ್ತು ದೇಹ ದಂಡನೆಗಳನ್ನು ರದ್ದು ಗೊಳಿಸುವುದು ಮತ್ತು ಈಗಾಗಲೇ ಇರುವ ಕಾನೂನುಗಳನ್ನಾದರೂ ಅತ್ಯಂತ ಕಟ್ಟಿನಿಟ್ಟಾಗಿ ಪರಿಪಾಲಿಸುವುದು.

	1848 ಮೇ 26ರಂದು ಬೆಲೀನ್‍ಸ್ಕಿ ನಿಧನನಾದ. ಸೇಂಟ್ ಪೀಟರ್ಸ್‍ಬರ್ಗಿನಲ್ಲಿ ಅವನ ಪಾರ್ಥಿವ ಶರೀರವನ್ನು ಸಮಾಧಿಮಾಡಲಾಯಿತು. 

	`ಗೋಗೊಲ್ ಪತ್ರ ವಿದೇಶದಲ್ಲಿ ಬರೆದದ್ದರಿಂದ ಅದು ಮುಂದಿನ ಪೀಳಿಗೆಗಳಿಗೆ ಬೆಲೀನ್‍ಸ್ಕಿಯ ಬಳುವಳಿಯಾಗಿ ಉಳಿದುಕೊಂಡಿತು. ರಷ್ಯಾದಲ್ಲೇ ಅದನ್ನು ಬರೆದಿದ್ದಲ್ಲಿ ಆ ಪತ್ರದ ಜೊತೆಗೇ ಬೆಲೀನ್‍ಸ್ಕಿ ಮರಣದಂಡನೆಗೆ ಗುರಿಯಾಗಿರುತ್ತಿದ್ದ. ಆ ಪತ್ರವನ್ನು ಕುರಿತು ಲೆನ್‍ನರ ಮಾತು ಅರ್ಥಪೂರ್ಣವಾಗಿದೆ: ``ಪ್ರಜಾಪ್ರಭುತ್ವದ ಮುಕ್ತ ಪತ್ರಿಕಾ ಮಾಧ್ಯಮದಲ್ಲಿ ಕಾಣಿಸಿಕೊಂಡ ಅತಿ ಮಹತ್ವದ ಲೇಖನಗಳಲ್ಲೊಂದು. ಇಂದಿಗೂ ಅದು ತನ್ನ ಮಹತ್ತ್ವವನ್ನು ಉಳಿಸಿಕೊಂಡು ಜೀವಂತವಾಗಿದೆ.	ಝಾರ್ ಪ್ರಭುತ್ವಕ್ಕೆ ಈ ಪತ್ರದ ಸುಳಿವು ತಿಳಿಯುವ ಹೊತ್ತಿಗಾಗಲೆ ಬೆಲೀನ್‍ಸ್ಕಿ ನಿಧನನಾಗಿದ್ದ. ಗುಪ್ತದಳದ ಅಧಿಕಾರಿ ಐ.ವಿ.ದೊಬೆಲ್ತ್ ಈ ಮಹಾನ್ ವಿಮರ್ಶಕನನ್ನು `ಸಾಯುವತನಕ ಸೆರೆಮನೆಯಲ್ಲಿ ಕೊಳೆಹಾಕುವ, ಅವಕಾಶ ತಪ್ಪಿದ್ದಕ್ಕಾಗಿ ವಿಷಾದಿಸಿದ. 

	`ಗೋಗೊಲ್ ಪತ್ರ ಹೊಂದಿರುವುದು, ಅದನ್ನು ಪ್ರತಿಮಾಡುವುದು ಘೋರ ಅಪರಾಧವೆಂದು eóÁರ್ ಪ್ರಭುತ್ವ ನಿಷೇಧಾಜ್ಞೆ ಹೊರಡಿಸಿತು. ವರ್ಷಗಟ್ಟಲೆ ಬೆಲೀನ್‍ಸ್ಕಿಯ ಹೆಸರನ್ನೂ ಪತ್ರಿಕೆಗಳಲ್ಲಿ ಮುದ್ರಿಸಕೊಡದೆಂದು ನಿಷೇಧಿಸಿತು. 1849ರಲ್ಲಿ ಈ ಪತ್ರವನ್ನು `ಪೆತ್ರಷೇವ್‍ಸ್ಕಿವ್ಯಾಸಂಗಗೋಷ್ಟಿ ಓದಿದ್ದಕ್ಕಾಗಿ ರಷ್ಯಾದ ಖ್ಯಾತ ಲೇಖಕ ದಸ್ತಯೇವ್‍ಸ್ಕಿಗೆ ಮರಣದಂಡನೆ ವಿಧಿಸಿ, ಆ ಬಳಿಕ ಅದನ್ನು ನಾಲ್ಕು ವರ್ಷಗಳ ಕಠಿಣ ಸಜೆಗಿಳಿಸಿ ಸೈಬೀರಿಯಾಕ್ಕೆ ಕಳಿಸಲಾಯಿತು. ರಷ್ಯಾದಲ್ಲಿ ಈ ಪತ್ರದ ಪೂರ್ಣಪಾಠ ಪ್ರಕಟವಾದದ್ದು 1914ರಲ್ಲಿ-67 ವರ್ಷಗಳ ಬಳಿಕ. 
 
	ಆದರೂ ಬೆಲೀನ್‍ಸ್ಕಿಯ ಕೃತಿಗಳು, ಗಾಳಿ ಬೆಳಕುಗಳಂತೆ. ಜನಮನವನ್ನು ತುಂಬುತ್ತಲೇ ಇದ್ದುವು. `ಗೋಗೊಲ್‍ಗೆ ಪತ್ರ ' ವನ್ನು ಸಾವಿರಾರು ಜನ ಕಂಠಪಾಠ ಮಾಡಿ ಜನರಲ್ಲಿ ಪ್ರಸಾರ ಮಾಡುತ್ತಿದ್ದರು. ರಷ್ಯಾದಲ್ಲಿ ಮಾತ್ರವಲ್ಲದೆ ಮಾನವತಾಮೌಲ್ಯಗಳಿಂದ ಸ್ಪೂರ್ತಿಗೊಂಡು ಮುನ್ನಡೆಯುತ್ತಿದ್ದ ಇತರ ದೇಶಗಳಲ್ಲೂ ಬೆಲೀನ್‍ಸ್ಕಿಯ ಪ್ರಗತಿಶೀಲ ವಿಚಾರಗಳು ಪರಿಣಾಮಕಾರಿ ಪ್ರಭಾವವಾಗಿ ಬೆಳೆದುವು. 

	ಬೆಲೀನ್‍ಸ್ಕಿಯ ಸೌಂದರ್ಯಮೀಮಾಂಸೆಯನ್ನು ಬೆಳೆಸುವ ಶಿಷ್ಯಪರಂಪರೆಯೇ ಹುಟ್ಟಿಕೊಂಡಿತು. ಚೆರ್ನಿಷೇವ್‍ಸ್ಕಿ (1828-89) ಮತ್ತು ದೊಬ್ರೊಲ್ಯೂಬೊವ್ (1836-61) ಅದನ್ನು ವ್ಯಾಪಕವಾಗಿ ಮುಂದುವರಿಸಿದರು. ಅಸ್ಟ್ರೋವ್‍ಸ್ಕಿಯ ನಾಟಕಗಳ ವಿಮರ್ಶೆಯಲ್ಲಿ ದೊಬ್ರೊಲ್ಯೂಬೊವ್ ಬೆಲೀನ್‍ಷ್ಕಿಯ ಸಾಹಿತ್ಯ ವಿಮರ್ಶೆಯ ಸೂತ್ರಗಳನ್ನು ಪ್ರಭಾವಶಾಲಿಯಾಗಿ ಬೆಳೆಸಿದ್ದನ್ನು ಕಾಣಬಹುದಾಗಿದೆ. ಮುಂದೆ ಗಿಯೋರ್ಗಿ ಪ್ಲೆಹಾನೊವ್ (1856-1918) ಬೆಲೀನ್‍ಸ್ಕಿಯ ಸೌಂದರ್ಯಮೀಮಾಂಸೆಯನ್ನು ಸೂತ್ರೀಕರಿಸಿ ಬೆಳೆಸಿದನೆನ್ನಬಹುದು. 

	ಮಾನವತಾ ಮೌಲ್ಯಗಳನ್ನಾಧರಿಸಿ ಪ್ರಗತಿಪಥದತ್ತ ನಡೆಯುವ ಮಾನವ ಕುಲಕ್ಕೆ ಬೆಲೀನ್‍ಸ್ಕಿಯ ಭೌತವಾದಿ ಸೌಂದರ್ಯಮೀಮಾಂಸೆ ಎಂದಿಗೂ ಸ್ಫೂರ್ತಿ ನೀಡುವ ಚಿರನೂತನ ಚೈತನ್ಯವಾಗಿರುತ್ತದೆ. ಖ್ಯಾತ ಸೌಂದರ್ಯಮೀಮಾಂಸಕರೂ ಮಾನವತಾವಾದಿಗಳೂ ಆದ ಜಾರ್ಜ್ ಲುಕಾಕ್ಸ್‍ರ ಮಾತುಗಳಲ್ಲಿ ಹೇಳುವುದಾದರೆ:

	``ರಷ್ಯಾದಲ್ಲಿ ಕ್ರಾಂತಿಕಾರಿಜನವಾದಿ ಸೌಂದರ್ಯಮೀಮಾಂಸೆಯ ಪ್ರವರ್ತಕನಾದ ಬೆಲೀನ್‍ಸ್ಕಿ ಉಳಿಸಿಕೊಂಡ. ಈ ಕಾರಣದಿಂದಾಗಿ 1848ಕ್ಕೆ ಮುಂಚಿನ ಮಹೋನ್ನತ ಐರೋಪ್ಯ ಚಿಂತಕರ ಸಮಕಾಲೀನನೂ ಸರೀಕನೂ ಆಗಿದ್ದ.

``ಹೆಗೆಲ್‍ನ ತಾರ್ಕಿಕ ಗತಿಸೂತ್ರದ ಉದಾತ್ತ ಐತಿಹಾಸಿಕ ದಿಗಂತಗಳನ್ನು ಬೆಲೀನ್‍ಸ್ಕಿ ಉಳಿಸಿಕೊಂಡ. ಈ ಕಾರಣದಿಂದಾಗಿ 1848ಕ್ಕೆ ಮುಂಚಿನ ಕಾಲದಲ್ಲಿ-ತಾತ್ತ್ವಿಕ ಕ್ಷೇತ್ರದಲ್ಲಿ ತಲ್ಲಣಿಸುತ್ತಿದ್ದ ಲೋಕ ದೃಷ್ಟಿಯ ಮಹತ್ತರ ಗಂಡಕಾಲದಲ್ಲಿ-ತುಂಬ ಮುಂದಿದ್ದ ಐರೋಪ್ಯ ಮಹೋನ್ನತರ ಮುಂಚೂಣಿಯ ಅಗ್ರಪಂಕ್ತಿಯಲ್ಲಿ ಅವನು ನಿಲ್ಲುತ್ತಾನೆ. 

``ಜನವಾದಿ ಚಿಂತನೆಯ ಈ ನವೋತ್ಥಾನದ ಶ್ರೇಷ್ಠನಾಯಕರು ಮತ್ತು ಪ್ರತಿನಿಧಿಗಳೆಂದರೆ ಬೆಲೀನ್‍ಸ್ಕಿಯ ಜೀವಿತಸಾಧನೆಯ ಈರ್ವರು ಮಹಾನ್ ಉತ್ತರಾಧಿಕಾರಿಗಳು-ಚೆರ್ನಿಷೇವ್‍ಸ್ಕಿ ಮತ್ತು ದೊಬ್ರೊಲ್ಯೂಬೊವ್.

``ಬೆಲೀನ್‍ಸ್ಕಿ, ಚೆರ್ನಿಷೇವ್ ಮತ್ತು ದೊಬ್ರೊಲ್ಯೂಬೊವ್ ಅವರುಗಳನ್ನು ಐತಿಹಾಸಿಕವಾಗಿ ಆಗಿಹೋದ ಸಂಧಿಕಾಲವೊಂದರ ಪ್ರಮುಖ ಪ್ರತಿನಿಧಿಗಳೆಂದೂ ಅವರಿಂದು ಜೀವಂತ ಪರಿಣಾಮಕಾರಿ ಶಕ್ತಿಯಾಗುಳಿದಿಲ್ಲವೆಂದೂ ಪರಿಗಣಿಸಿದಲ್ಲಿ ಅದೊಂದು ದೊಡ್ಡ ದೋಷವೇ ಆಗುತ್ತದೆ. ನಿಜಸಂಗತಿ ತದ್ವಿರುದ್ಧವೇ ಆಗಿರುತ್ತದೆ. ಮಾನವಕುಲ-ವಿಕಸನದ ಇಂದಿನ ಪರ್ವಕಾಲದಲ್ಲಿ ನೈಜಸಾಹಿತ್ಯಕ ಸಂಸ್ಕಾರದತ್ತ ನಾವು ಸಾಗಬೇಕಾದರೆ, ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ ಈ ಪರ್ವಕಾಲದ ಮಹತ್ತ್ವದ ಸಮಸ್ಯೆಗಳ ಎತ್ತರಕ್ಕೇರಬೇಕೆಂಬುದು ನಮ್ಮ ಅಪೇಕ್ಷೆಯಾದರೆ, ಬೆಲೀನ್‍ಸ್ಕಿ, ಚರ್ನಿಷೇವ್ ಮತ್ತು ದೊಬ್ರೊಲ್ಯೂಬೊವ್ ಅವರುಗಳಿಂದ ಎಂದಿಗಿಂತ ಹೆಚ್ಚಾಗಿ ಇಂದು ನಾವು ಕಲಿಯಬಹುದು ಮತ್ತು ಕಲಿಯಲೇಬೇಕು.'' 					
  (ಡಿ.ವಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ